ಪೊಲೀಸ್ ದೌರ್ಜನ್ಯ ಖಂಡಿಸಿ ಬಂಟ್ವಾಳದಲ್ಲು ವಕೀಲರಿಂದ ಪ್ರತಿಭಟನೆ
ಬಂಟ್ವಾಳ: ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಮ್ ಎಂ.ಟಿ ಅವರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಬಂಟ್ವಾಳದ ವಕೀಲರ ಸಂಘದ ವತಿಯಿಂದ ಸೋಮವಾರ ಜೆ ಎಂ ಎಫ್ ಸಿ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಯಿತು.

ಬಳಿಕ ಬಂಟ್ವಾಳ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಆರೋಪಿ ಪೋಲೀಸರನ್ನು ತಕ್ಷಣ ಬಂಧಿಸಬೇಕು, ಅವರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣ ಸರಕಾರ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಎಂದು ಈ ಸಂದರ್ಭ ಪ್ರತಿಭಟನಾಕಾರ ವಕೀಲರು ಒತ್ತಾಯಿಸಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ ಮಾತನಾಡಿ, ಪೊಲೀಸರ ದೌರ್ಜನ್ಯ ಕಾನೂನು ಬಾಹಿರವಾಗಿದೆ, ಆರೋಪಿಗಳ ವಿರುದ್ದ ಎಫ.ಐ.ಆರ್. ದಾಖಲಾದರೂ ಈ ವರೆಗೂ ಆರೋಪಿಗಳನ್ನು ಬಂದಿಸದೆ ಇರುವ ವಿಳಂಬ ದೋರಣೆ ಸರಿಯಲ್ಲ ಇದನ್ನುವಕೀಲರ ಸಂಘ ಖಂಡಿಸುತ್ತದೆ ಎಂದರು.
ವಕೀಲ ಮೋಹನ್ ಕಡೇಶಿವಾಲ್ಯ ಮಾತನಾಡಿ ನಿರಂತರವಾಗಿ ಯುವ ವಕೀಲರ ಮೇಲೆ ನಡೆಯುವ ದೌರ್ಜನ್ಯ ಖಂಡನೀಯ. ನ್ಯಾಯಾಲಯ ಈ ಬಗ್ಗೆ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಮಾತನಾಡಿ, ಹಲ್ಲೆಗೊಳಗಾದ ವಕೀಲರ ಬೆಂಬಲವಾಗಿ ವಕೀಲರ ಸಂಘ ಬಂಟ್ವಾಳ ಸದಾ ಜೊತೆಗಿರುತ್ತದೆ ಎಂಬ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಬಂಟ್ವಾಳ ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ,ಕಿರಿಯ ವಕೀಲರು ಭಾಗವಹಿಸಿದ್ದರು,