Published On: Mon, Nov 13th, 2023

ಮಂಗಳಜ್ಯೋತಿ ಜಂಕ್ಷನ್‌ನಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ‘ದೀಪಾವಳಿ ಸಂಭ್ರಮ’, ಎಲ್ಲರೂ ಕೂಡಿ ದೀಪಾವಳಿ ಆಚರಿಸೋಣ : ಮುಲ್ಲೈ ಮುಗಿಲನ್

ಕೈಕಂಬ: ಮಂಗಳೂರಿನ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಾಮಂಜೂರು ಮಂಗಳಜ್ಯೋತಿ ಜಂಕ್ಷನ್‌ನಲ್ಲಿ ನ. ೧೨ರಂದು ಆಯೋಜಿಸಿದ ʼದೀಪಾವಳಿ ಸಂಭ್ರಮ-೨೦೨೩’ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದೀಪಗಳ ಹಬ್ಬ ದೀಪಾವಳಿಯಲ್ಲಿ ಎರಡು ಅರ್ಥ ಕಾಣುತ್ತೇವೆ, ತನ್ನನ್ನು ಉರಿಸಿಕೊಂಡು ಬೇರೆಯವರಿಗೆ ಬೆಳಕು ಕೊಡುವುದು ಒಂದು ಅರ್ಥವಾದರೆ, ಒಂದು ದೀಪದಿಂದ ನೂರಾರು-ಸಾವಿರಾರು ದೀಪಗಳು ಬೆಳಗಬಹುದು ಎಂಬುದು ಇನ್ನೊಂದು ಅರ್ಥ.

ಬೆಳಕು ಜ್ಞಾನದ ಸಂಕೇತವೂ ಹೌದು. ಎಲ್ಲರೂ ಕೂಡಿಕೊಂಡು ಈ ಬೆಳಕಿನ ಹಬ್ಬ ಆಚರಿಸಬೇಕು. ಆಗಲೇ ದೀಪಾವಳಿ ಅರ್ಥಪೂರ್ಣವಾಗುವುದು ಎಂದು ಹೇಳಿದರು.

ಮಂಗಳೂರು ಪ್ರಗತಿಪರ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಡಾ. ವಸಂತ್ ಕುಮಾರ್ ಮಾತನಾಡಿ, ಬೆಳಕು ಎಲ್ಲರಿಗೂ ಬೇಕು. ಹಾಗಾಗಿ ಬೆಳಕಿನ ಹಬ್ಬಕ್ಕೆ ಜಾತಿ-ಧರ್ಮ ಎಂಬುದಿಲ್ಲ.

ದಾರಿ ತಪ್ಪುತ್ತಿರುವ ಯುವಕರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜದ ನಿರ್ಮಿಸಬೇಕು. ಸಮಾಜ ಎಂಬ ಮೂರಕ್ಷರದಲ್ಲಿ ಸಂಬಂಧಗಳು ಮಾನವನಲ್ಲಿ ಜನಿಸಬೇಕು ಎಂಬ ಅರ್ಥ ಅಡಗಿದೆ. ಅದೇ ಸಮಾಜ ಭಾವನೆ.

ಸಂಸ್ಕಾರ ಎಂದರೆ ಬರೇ ದೇವಸ್ಥಾನ ಕಟ್ಟುವುದು ಮೂರ್ತಿ ಕೆತ್ತುವುದಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಎಂದರು.

ಮಂಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪೌಲ್ ಮಾತನಾಡಿ, ಭಾರತದ ಇತಿಹಾಸ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಕಂಡಿದೆ. ಆಗ ಎಲ್ಲರೂ ಪ್ರೀತಿ, ಸಾಮರಸ್ಯ, ಭಾವೈಕ್ಯತೆಯಿಂದ ಜೀವಿಸುತ್ತಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ. ದೀಪಾವಳಿ ಎಲ್ಲ ಧರ್ಮದ ಗಡಿ ಮೀರಿ ಆಚರಿಸುವ ಹಬ್ಬವಾಗಲಿ ಎಂದು ಶುಭ ಹಾರೈಸಿದರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲತೀಕ್ಷಾ ಸ್ವಾಗತ ನೃತ್ಯ ಮಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು.

ಕಾರ್ಪೊರೇಟರ್ ಅಬ್ದುಲ್ ಲತೀಫ್, ಮಂಗಳಜ್ಯೋತಿಯ ಕೊರಗಜ್ಜ ಸೇವಾ ಟ್ರಸ್ಟ್‌ ನ ಅಧ್ಯಕ್ಷ ಲಕ್ಷ್ಮಣ್ ವಾಮಂಜೂರು, ಮಂಗಳೂರು ಬೆಥನಿ ಸಿಸ್ಟರ್ಸ್ ಪ್ರೊವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ, ಜಂಟಿ ಕಾರ್ಯದರ್ಶಿ‌ ಮಂಜುಳಾ ನಾಯಕ್, ಕೋಶಾಧಿಕಾರಿ) ಡಾಲ್ಫಿ ಡಿ’ಸೋಜ ಹಾಗೂ ಇತರ ಹಿರಿಯ ಗಣ್ಯರು, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮನೋಜ್ ಕುಮಾರ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಮತ್ತು ಬಳಗದವರು ಸೌಹಾರ್ದ ನೃತ್ಯ ಪ್ರದರ್ಶಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter