ಬಾರ್ದಿಲ ದೇವಸ್ಥಾನದಲ್ಲಿ ನಿಧಿ ಕಲಶ ಪೂರ್ವಕ ಷಡಾಧಾರ ಪ್ರತಿಷ್ಠೆ
ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಬಾರ್ದಿಲ ದೇವರಗುಡ್ಡೆ ಸಾಂಬ ಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ಅಂಗವಾಗಿ ನಿರ್ಮಾಣವಾಗಲಿರುವ ಸಂಪೂರ್ಣ ಶಿಲಾಮಯ ಗರ್ಭಗ್ರಹದ ನಿಧಿ ಕಲಶ ಸ್ಥಾಪನೆ ಪೂರ್ವಕ ಷಡಾಧಾರ ಪ್ರತಿಷ್ಠೆಯು, ಕ್ಷೇತ್ರದ ತಂತ್ರಿಗಳಾದ ಡಾ.ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ, ವಿದ್ವಾನ್ ಕುಡುಪು ಕೃಷ್ಣರಾಜ ತಂತ್ರಿಯವರ ಮಾರ್ಗದರ್ಶನದಲ್ಲಿ, ದೇವಳದ ಅರ್ಚಕ ರಾಘವೇಂದ್ರ ಕಾರಂತರ ಉಪಸ್ಥಿತಿಯಲ್ಲಿ ಋತ್ವಿಜರ ಮಂತ್ರ ಘೋಷದೊಂದಿಗೆ ನೆರೆದಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಪೂರ್ವಾಹ್ನ 10.45 ರ ಧನುರ್ಲಗ್ನ ಸುಮುಹೂರ್ತದಲ್ಲಿ ನೆರವೇರಿತು.

ಬೆಳಿಗ್ಗೆ ಗಂಟೆ 9 ಕ್ಕೆ ಸಾಮೂಹಿಕ ಪ್ರಾರ್ಥನೆ ಬಳಿಕ ಸಪ್ತ ಶುದ್ದಿ, ವಾಸ್ತು ಪೂಜೆ, ಷಡಾಧಿವಾಸದ ಬಳಿಕ 10:30 ರಿಂದ ಷಡಾಧಾರ ಪ್ರತಿಷ್ಠೆ ನಡೆದು ಭಕ್ತರಿಂದ ಸ್ವರ್ಣ, ಬೆಳ್ಳಿಯಿಂದ ನಿಧಿ ಕಲಶ ಪೂರಣೆ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ. ಸೋಮಶೇಖರ ಶೆಟ್ಟಿ ಮತ್ತು ಸದಸ್ಯರುಗಳು ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಕಾರ್ಯಾಧ್ಯಕ್ಷ ಜಗದೀಶ್ ಪಾಕಜೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ ಕಟ್ಟಪುಣಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಕಿಲೆಂಜಾರು, ಕುಲವೂರು, ಮುತ್ತೂರು ಹಾಗೂ ಇರುವೈಲು ಗ್ರಾಮಗಳ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.