ಇರುವೈಲು, ಕೋರಿಬೆಟ್ಟು ಕ್ರಾಸ್ ಬಳಿ ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ
ಕೈಕಂಬ: ಇರುವೈಲಿನ ಪೂವಣಿಬೆಟ್ಟು ಬಳಿಯ ಕೋರಿಬೆಟ್ಟು ಕ್ರಾಸ್ ಬಳಿ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ನಿರ್ಮಾಣ ಸಮಿತಿ ಕೊಡಂಗೆ, ಇರುವೈಲು ಇದರ ವತಿಯಿಂದ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ಭಾನುವಾರ ನಡೆಯಿತು.

ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸೂಚರಿತ ಶೆಟ್ಟಿ, ನಮ್ಮ ದೇಶ ವಿಶಿಷ್ಟವಾದುದು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಕೃಷಿ ಪ್ರಧಾನವಾದ ದೇಶವಾಗಿದೆ. ನಮ್ಮಲ್ಲಿ ಗ್ರಾಮೀಣ ಪ್ರದೇಶ ಹೆಚ್ಚಾಗಿದ್ದು ಇಂತಹ ಪ್ರದೇಶದಲ್ಲಿ ಪಕ್ಷ, ಧರ್ಮ ರಹಿತವಾಗಿ ಎಲ್ಲರೂ ಸೇರಿ ನಿರ್ಮಿಸಿದ ತಂಗುದಾಣ ಕೇವಲ ಒಂದು ಬಸ್ ಸ್ಟಾಂಡ್ ಆಗಬಾರದು ಊರಿನ ಸಮಾನ ಮನಸ್ಕರು ಕುಳಿತು ಊರಿನ ಅಭಿವೃದ್ಧಿಯ ಬಗ್ಗೆ, ಸಾಮರಸ್ಯದ ಬಗ್ಗೆ ಸಕರಾತ್ಮಕವಾಗಿ ಚಿಂತನೆ ಮಾಡುವ ತಂಗುದಾಣವಾಗಬೇಕು.

ಈ ತಂಗುದಾಣ ನಿರ್ಮಾಣದಿಂದ ಇಲ್ಲಿನ ಹಿರಿಯರ ಆಸೆ ಈಡೇರಿದೆ ಇದೇ ರೀತಿ ಎಲ್ಲರೂ ಒಂದಾಗಿ ಸೇರಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಬಾರ್ದಿಲ ಮಸೀದಿಯ ಗುರುಗಳಾದ ಸಂಶಿಲ್ ಫೈಝಿ ಮಾತನಾಡಿ, ಸರ್ವ ಧರ್ಮಿಯರು ಒಟ್ಟು ಸೇರಿ ಸುಂದರವಾದ ತಂಗುದಾಣ ನಿರ್ಮಾಣ ಮಾಡಿರುವುದು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಮುನ್ನುಡಿಯಾಗಿದೆ.
ಪ್ರಸ್ತುತ ಕೋಮು, ಜಾತಿಗಳ ನಡುವಿನ ವೈಷಮ್ಯದಿಂದ ಹೊಡೆದಾಡಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಇಂತಹ ಸಾಮರಸ್ಯದ ಕಾರ್ಯಕ್ಕೆ ಅಭಿನಂದಿಸುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ರಾಜಕೀಯ ಹೋರಾಟ, ಬಡಿದಾಟ ಏನಿದ್ದರೂ ಅದು ಚುನಾವಣೆಯ ಸಂಧರ್ಭ ಮಾತ್ರ. ಉಳಿದಂತೆ ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು ಹೋರಾಡಬೇಕು.
ಇಲ್ಲಿನ ತಂಗುದಾಣ ನಿರ್ಮಾಣ ರಾಜಕೀಯ ಮತ್ತು ಧರ್ಮ ರಹಿತವಾಗಿ ಮಾಡಿರುವುದು ಅಭಿನಂದನೀಯ. ಈ ತಂಗುದಾಣ ಊರಿನ ಒಗ್ಗಟಿನ, ಸೌಹಾರ್ದದ ಕೇಂದ್ರವಾಗಿ, ಊರಿನ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ಸ್ಥಳವಾಗಬೇಕು. ಊರಿನ ಎಲ್ಲರೂ ಇದರ ಪ್ರಯೋಜನ ಪಡೆದುಕೊಂಡು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್, ಮೂಡಬಿದ್ರಿ ಪೊಲೀಸ್ ಠಾಣೆಯ ನಿವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉದ್ಯಮಿ ಇರುವೈಲು ಅಶೋಕ್ ಪೂಜಾರಿ ದಂಬೆಕೊಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಂಗುದಾಣ ನಿರ್ಮಾಣಕ್ಕೆ ಸಹಕರಿಸಿದ ಮಹನೀಯರುಗಳನ್ನು ಇದೇ ವೇಳೆ ಶಾಲು ಹೊದೆಸಿ ಗೌರವಿಸಲಾಯಿತು.
ತಂಗುದಾಣ ನಿರ್ಮಾಣ ಸಮಿತಿಯ ಸದಸ್ಯರು, ಸ್ಥಳೀಯ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುಪ್ರಿಯಾ ಅಭಿಷೇಕ್ ಪ್ರಾರ್ಥಿಸಿದರು. ಶೀನ ನಾಯ್ಕ್ ಇರುವೈಲು ಪ್ರಾಸ್ತಾವಣೆಗೈದು, ಸ್ವಾಗತಿಸಿ ವಂದಿಸಿದರು.