Published On: Mon, Oct 23rd, 2023

ನರಕ ಭಗವಂತನ ಚಿಕಿತ್ಸಾಲಯ: ರಾಘವೇಶ್ವರ ಶ್ರೀ

ಬಂಟ್ವಾಳ: ಸ್ವರ್ಗದಲ್ಲಿ ನಮ್ಮ ಪುಣ್ಯ ವ್ಯಯವಾದರೆ, ನರಕದಲ್ಲಿ ನಮ್ಮ ಪಾಪ ವ್ಯಯವಾಗುತ್ತದೆ. ದುಃಖ ಪಾಪವನ್ನು ಕಳೆಯುವಂಥದ್ದು. ಮನಸ್ಸಿಗೆ ನೋವಾದಾಗ ಅದು ಪಾಪ ಕಳೆಯಲು ಬಂದಿದ್ದು ಎಂಬ ಭಾವನೆ ನಮ್ಮದಾಗಬೇಕು. ನರಕ ನಿಜ ಅರ್ಥದಲ್ಲಿ ಭಗವಂತನ ಚಿಕಿತ್ಸಾಲಯ ಎಂದು  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಏಳನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.

ಪುಣ್ಯ ವ್ಯಯವಾದಾಗ ಮತ್ತೆ ಮತ್ತೆ ಇಹಲೋಕಕ್ಕೆ ಬರಬೇಕಾಗುತ್ತದೆ. ಆದರೆ ನರಕದಲ್ಲಿ ನಮ್ಮ ಪಾಪ ವ್ಯಯವಾಗುತ್ತದೆ. ಮಾಡಿದ ಪಾಪ, ದುಷ್ಕರ್ಮಗಳು ನಾಶವಾಗಿ ಆತ್ಮವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ವಿಶ್ಲೇಷಿಸಿದರು.

ಎದುರಿಸು, ಎದುರಿಸಲು ಸಾಧ್ಯವಾಗದಿದ್ದರೆ ದಿಕ್ಕು ತಪ್ಪಿಸು ಎಂಬ ತತ್ವ ರಾಜನೀತಿಯಲ್ಲಿದೆ. ಬಂಡಾಸುರನ ಉಪಟಳ ತಾಳಲಾರದೆ ದೇವತೆಗಳು ಕಂಗೆಟ್ಟಾಗ ಮೋಹಿನಿಯ ರೂಪದಲ್ಲಿ ರಾಜರಾಜೇಶ್ವರಿಯ ಪ್ರವೇಶವಾಗುತ್ತದೆ. ಬಂಡಾಸುರ ಮೋಹಪಾಶದಲ್ಲಿ ಸಿಲುಕುತ್ತಾನೆ. ಮೋಹ ಪಾಶದಲ್ಲಿ ಸಿಲುಲಕಿದವನಿಗೆ ಅದು ತಿಳಿಯುವುದಿಲ್ಲ. ಆದರೆ ಬೇರೆಯವರಿಗೆ ತಿಳಿಯುತ್ತದೆ.ಮೋಹಪಾಶದಲ್ಲಿ ಬಿದ್ದವರು  ಕರ್ತವ್ಯವನ್ನು ಮರೆತು, ಶ್ರೇಷ್ಠ ಮಾರ್ಗವನ್ನು ತ್ಯಜಿಸುತ್ತಾರೆ.  ಮಮಕಾರದಲ್ಲಿ ಮುಳುಗಿ ತನ್ನ ಎಲ್ಲ ಸತ್ಪಥಗಳಿಂದ ವಿಮುಖನಾಗುತ್ತಾನೆ ಎಂದು ವಿವರಿಸಿದರು.

ದೃಷ್ಟಿ, ಕರುಣೆ, ಕ್ಷಮೆಯ ಪ್ರತಿರೂಪವೇ ಗುರು. ಶಿಷ್ಯ ತಪ್ಪು ಮಾಡಿದಾಗ ಗುರುವಾದವನು ಆತನಿಗೆ ತಿಳಿಹೇಳಿ ಸರಿ ದಾರಿಯಲ್ಲಿ ಮುನ್ನಡೆಸಬೇಕು. ಇದರಂತೆ ಅಸುರ ಗುರು ಶುಕ್ರಾಚಾರ್ಯರು ಮೋಹ ಪಾಶದಲ್ಲಿ ಸಿಲುಕಿದ ಬಂಡಾಸುರನಿಗೆ ಎಚ್ಚರಿಕೆ ನೀಡುತ್ತಾರೆ. ಮೋಹಿನಿ ವಿಷ್ಣುಪತ್ನಿ, ಮೋಹಪಾಶದಿಂದ ಹೊರಬಂದು ಕರ್ತವ್ಯ ಪಥದಲ್ಲಿ ಮುನ್ನಡೆಯುವಂತೆ ಸೂಚಿಸುತ್ತಾರೆ ಎಂದು ಬಣ್ಣಿಸಿದರು.

ಮಂತ್ರಿಯ ಸಲಹೆಯಂತೆ ಬಂಡಾಸುರ ದೇವತೆಗಳ ತಪ್ಪಸ್ಸು ಕೆಡಿಸಿ, ತನ್ನ ತಪಸ್ಸು ಮುಂದುವರಿಸಲು ನಿರ್ಧರಿಸುತ್ತಾನೆ. ಬಂಡಾಸುರ ಇಂದ್ರಪ್ರಸ್ಥದ ಸನಿಹಕ್ಕೆ ಬಂದಾಗ ಉಜ್ವಲ ಕೋಟೆ ಗೋಚರಿಸುತ್ತದೆ. ತಪಸ್ಸು ಮಾಡುತ್ತಿರುವ ದೇವತೆಗಳ ರಕ್ಷಣೆಗೆ ಜಗದಾಂಬೆ ಕಟ್ಟಿದ ಮಾಯಾಕೋಟೆ ಅದು. ಅದನ್ನು ಬಂಡಾಸುರ ಧ್ವಂಸಗೊಳಿಸುತ್ತಿದ್ದಂತೆ ಮತ್ತೆ ಮತ್ತೆ ಕೋಟೆ ನಿರ್ಮಾಣವಾಗುತ್ತದೆ. ಕೊನೆಗೆ ವಿಫಲನಾದ ಬಂಡಾಸುರ ಮತ್ತೆ ಮೋಹಪಾಶಕ್ಕೆ ಸಿಲುಕುತ್ತಾನೆ ಎಂದು ಹೇಳಿದರು.

ವಿಶ್ವೇಶ್ವರ ಭಟ್ ಉಂಡೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಆರ್ ಎಸ್ ಎಸ್‌ ಮುಖಂಡರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್, ಪಿ.ಎಸ್.ಪ್ರಕಾಶ್, ಭಾಸ್ಕರ ದೇವಸ್ಯ, ವಿಠಲ ಕುಲಾಲ್, ಕರ್ನಾಟಕ ಬ್ಯಾಂಕ್ ಡಿಜಿಎಂ ಹರಳೆ ವಸಂತ್ ಆರ್, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಮಾತೃ ಪ್ರಧಾನರಾದ ವೀಣಾ ಗೋಪಾಲಕೃಷ್ಣ ಭಟ್ ಪುಳು, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ್ ಕೆದ್ಲ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಂಗಳೂರು ಮಂಡಲ ಕಾರ್ಯದರ್ಶಿ ಮಹೇಶ್ ಕುದುಪುಲ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter