ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ. ಕೊಡ್ಮಾಣ್ ಕಾಂತಪ್ಪ ಶೆಟ್ಟಿ ವ್ಯಕ್ತಿಯಲ್ಲ, ನಮ್ಮೆಲ್ಲರಿಗೂ ಪ್ರೇರಕ ಶಕ್ತಿ: ಸುರೇಶ ಪರ್ಕಳ
ಬಂಟ್ವಾಳ: ದಿವಂಗತ ಕೊಡ್ಮಣ್ ಕಾಂತಪ್ಪಣ್ಣ ವ್ಯಕ್ತಿಯಲ್ಲ, ಪ್ರತಿಯೊಬ್ಬರಿಗೂ ಪ್ರೇರಕ ಶಕ್ತಿ, ಅವರೋರ್ವ ಸಾಧಕರಾಗಿದ್ದು, ಅವರಿಂದ ಪಡೆದ ಅನುಭವ, ಮಾರ್ಗದರ್ಶನವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಜವಾಬ್ದಾರಿ ನಮ್ಮದು, ಭಾರತದಂತಹ ಪುಣ್ಯ ಭೂಮಿಯಲ್ಲಿ ಕಾಂತಪ್ಪಣ್ಣ ಪುಣ್ಯ ಪುರುಷರಾಗಿ ಬಾಳಿ, ಬದುಕಿ ಸಮಾಜಕ್ಕೆ ಜೀವನವನ್ನು ಸಮರ್ಪಿಸಿದರು ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ಪರ್ಕಳ ಹೇಳಿದರು.
ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಅಶ್ರಯದಲ್ಲಿ 4 ದಿನಗಳ ಕಾಲ ನಡೆಯುವ 35ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಅಂಗವಾಗಿ ನಡೆದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗೈದ ಅವರು, ಕಾಂತಪ್ಪಣ್ಣ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರರಾಗಿದ್ದಾರೆ ಎಂದರು.
ಜಾತಿ ಪದ್ಧತಿಯಿಂದ ಮೆಲ್ಲೆದ್ದು ಬಂದ ಮೇರು ವ್ಯಕ್ತಿತ್ವ ಕಾಂತಪ್ಪಣ್ಣನದ್ದು, ಎಲ್ಲಾ ಜನರನ್ನು ಹಿಂದುತ್ವದ ಧಾರೆಯೆಡೆಗೆ ತಂದವರು, ಸಮಾಜ ಹಾಗೂ ರಾಷ್ಟ್ರ ದ ಬಗ್ಗೆ ನಂಬಿಕೆ ಇಟ್ಟವರಲ್ಲದೆ ದೇಶ ಭಕ್ತಿಯನ್ನು ಜನರಲ್ಲಿ ಬಿತ್ತಿದವರು ಕಾಂತಪಣ್ಣ, ಅವರ ಸಿದ್ದಾಂತ, ಕಾರ್ಯತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಹಾಗೂ ವ್ಯಸನ ಮುಕ್ತವಾದ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ದರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ” ಚೈತನ್ಯ” ಸ್ಮರಣ ಸಂಚಿಕೆಯ ಮುಖಪುಟವನ್ನು ಅನಾವರಣಗೊಳಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾಂತಪ್ಪಣ್ಣನ ನಿಸ್ವಾರ್ಥ ಜೀವನ, ಕಷ್ಟಗಳಿಗೆ ಸ್ಪಂದಿಸುವ ಗುಣ ಎಲ್ಲರಿಗೂ ಅನುಕರಣೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕಿ ದೇಜಮ್ಮ ಎ. ಅವರು ಕಾಂತಪಣ್ಣ ಹಾಗೂ ಕೆನರಾ ಕಾಲೇಜು ನಡುವಿನ ಬಾಂಧವ್ಯವನ್ನು ನೆನಪಿಸಿದರು.
ವೇದಿಕೆಯಲ್ಲಿ ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನೈಗ ಕೊಡ್ಮಾಣ್ ಕೋಡಿ, ಶಾರದಾ ಪೂಜಾ ಸೇವಾ ಮಹೋತ್ಸವದ ಸಂಯೋಜಕರಾದ ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಕೆ. ಆರ್ ದೇವದಾಸ್, ಪ್ರ.ಕಾರ್ಯದರ್ಶಿ ಹರೀಶ ಕಲ್ಲಾಜಾಲ್, ಉಪಸ್ಥಿತರಿದ್ದರು.
ಶಾರದಾ ಪೂಜಾ ಮಹೋತ್ಸವ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತವನೆಗೈದರು. ಸಂಯೋಜಕರಾದ ಗೋಪಾಲ್ ಗೋವಿನತೋಟ ಸ್ವಾಗತಿಸಿ,ಸಂತೋಷ ಶೆಟ್ಟಿ ಕೊಡ್ಮಾಣ್ ವಂದಿಸಿದರು,ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.