ಮಳಲಿ: ತಾಂಬೂಲ-ಅಷ್ಟಮಂಗಳ ಪ್ರಶ್ನೆ ವಿಮರ್ಶಾ ಚಿಂತನೆ, ದೇವಸ್ಥಾನ ನಿರ್ಮಿಸಲು ಸೂಚನೆ
ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಸಮೀಪದ ಮಳಲಿ(ಮಣೇಲ್)ಯ ಶ್ರೀ ಕ್ಷೇತ್ರ ದೇವರ ಗುಡ್ಡೆಯಲ್ಲಿ ಸೂರ್ಯನಾರಾಯಣ ದೇವಸ್ಥಾನ ನಿರ್ಮಿಸುವ ಸಲುವಾಗಿ ಆ.೩೦ರಂದು ಬುಧವಾರ ಬೆಳಿಗ್ಗೆ ಸಾನಿಧ್ಯ ಸ್ಥಳದಲ್ಲಿ ಗ್ರಾಮಸ್ಥರಿಂದ ಸ್ಥಳ ಶುದ್ಧಿ ಹಾಗೂ ಗಣಹೋಮ ನಡೆಯಿತು.
ವೇದಮೂರ್ತಿ ಸುಬ್ರಹ್ಮಣ್ಯ ತಂತ್ರಿ ಪೊಳಲಿ ಮತ್ತು ವೇದಮೂರ್ತಿ ಪ್ರಸನ್ನ ಆಚಾರ್ಯ ನಿಟ್ಟೆ ಇವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ -ಅಷ್ಟಮಂಗಲ ಪ್ರಶ್ನೆಗಳ ಪುನರ್ ವಿಮರ್ಶಾ ಚಿಂತನೆ ನಡೆಸಲಾಯಿತು.
ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ, ಆಯ ಪ್ರಕಾರ ಗುಡಿ ಗೋಪುರ ನಿರ್ಮಿಸುವುದು, ಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ, ದೇವಿಯ ಪ್ರಾರ್ಥನೆಯ ಸಲುವಾಗಿ ಇಲ್ಲಿ ವಾರ್ಷಿಕ ಆರಾಧನೆ ನಡೆಸುವುದು, ಪೊಳಲಿ ದೇವರಿಗೆ ವಿಶೇಷವಾಗಿ ಮಳಲಿ ಭಾಗದಲ್ಲಿ ಜಳಕದ ಕಟ್ಟೆ ನಿರ್ಮಿ ಸುವುದು, ದೇಗುಲದ ಸಾನಿಧ್ಯದಲ್ಲಿ ಭಜನೆ ನಡೆಸುವುದು ಇತ್ಯಾದಿ ವಿಚಾರಗಳ ಬಗ್ಗೆ ಚಿಂತನೆ ನಡೆಸಲಾಯಿತು.
ಯಾವುದೇ ವಿಘ್ನ ಬಾರದಂತೆ ಎಲ್ಲರೂ ಒಟ್ಟಾಗಿ ಸೇರಿ ಒಮ್ಮತದಿಂದ ಅತ್ಯಂತ ಶೀಘ್ರವಾಗಿ ಸೂರ್ಯನಾರಾಯಣ ದೇವಸ್ಥಾನ ನಿರ್ಮಿಸಲು ಅನುಗ್ರಹ ನೀಡುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು. ದೇವಸ್ಥಾನಕ್ಕೆ ಸಂಬಂಧ ಪಟ್ಟ ದೈವ ದೇವರು, ನಾಗ ಸಾನಿಧ್ಯಗಳ ಚಿಂತನೆ ನಡೆಸಿ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನಡೆಸುವ ಬಗ್ಗೆಯೂ ಚಿಂತನೆ ನಡೆಯಿತು. ಉದಯ ಆಳ್ವ ಉಳಿಪಾಡಿಗುತ್ತು ಸಹಿತ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.