ಪುರಸಭಾ ವ್ಯಾಪ್ತಿ ಸಹಿತ ವಿವಿಧ ಗ್ರಾ.ಪಂ.ಗಳಲ್ಲಿ ಫಲಾನುಭವಿಗಳಿಂದ ಗೃಹಲಕ್ಷ್ಮೀ ಕಾರ್ಯಕ್ರಮ ವೀಕ್ಷಣೆ
ಬಂಟ್ವಾಳ: ಮೈಸೂರಿನಲ್ಲಿ ಬುಧವಾರ ಅನುಷ್ಠಾನಗೊಂಡ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಫಲಾನುಭವಿಗಳು ವೀಕ್ಷಿಸಲು ಬಂಟ್ವಾಳ ಪುರಸಭೆ ಸಹಿತ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಪುರಸಭಾ ಕಛೇರಿ ಸಭಾಂಗಣ, ಕೈಕಂಬ ಸೂರ್ಯವಂಶ ಕಟ್ಟಡದ ಸಭಾಂಗಣ, ಬಿ.ಸಿ.ರೋಡು ರಂಗೋಲಿ ಹೊಟೇಲ್ ಸಭಾಂಗಣ, ಮೆಲ್ಕಾರ್ ಬಿರ್ವ ಸೆಂಟರ್ ಸಭಾಂಗಣದಲ್ಲಿ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನೆಯ ಪ್ರಸಾರವನ್ನು ಪರದೆಯ ಮೂಲಕ ಫಲಾನುಭವಿಗಳು ವೀಕ್ಷಿಸಿದರು.
ವೀರಕಂಬ ಗ್ರಾ.ಪಂ.ನಲ್ಲಿ:
ಗ್ರಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಸಭಾ ಭವನದಲ್ಲಿ ನಡೆಯಿತು.
ಪಂಚಾಯತ್ ವತಿಯಿಂದ ಬೃಹತ್ ಪರದೆ ಅಳವಡಿಸಿ ಗ್ರಹಲಕ್ಷ್ಮಿ ಯೋಜನೆ ಅನುಷ್ಠಾನದ ಉದ್ಘಾಟನಾ ಕಾರ್ಯಕ್ರಮದ ನೇರ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರುಗಳಾದ ಗೀತ ಜಯಶೀಲ ಗಾಂಭೀರ್, ಅಬ್ದುಲ್ ರಹೀಮಾನ್, ಗ್ರಾಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು,ಸಿಬ್ಬಂದಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್, ಪಂಚಾಯತಿ ಸಿಬ್ಬಂದಿಗಳು, ವೀರಕಂಬ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು