ಕುಕ್ಕಟ್ಟೆಯಲ್ಲಿ ಅಡ್ವಕೇಟ್
ಸುಲತಾರಿಗೆ ಶ್ರದ್ಧಾಂಜಲಿ ಸಭೆ
ಕೈಕಂಬ : ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಕೆಲವೇ ದಿನಗಳ ಅಂತರದಲ್ಲಿ ಯಕೃತ್ ಸಮಸ್ಯೆಯಿಂದ ನಿಧನರಾದ ಮೊಗರು ಗ್ರಾಮದ ಸುಲತಾ ಸಂತೋಷ್ ಅವರಿಗೆ ತಾಲೂಕು ಮರಾಠಿ ಸೇವಾ ಸಂಘ(ರಿ) ಗಂಜಿಮಠ ಮತ್ತು ಸ್ಥಳೀಯ ಅಭಿಮಾನಿಗಳ ವತಿಯಿಂದ ಕುಕ್ಕಟ್ಟೆ ಸಭಾಗೃಹದಲ್ಲಿ ಭಾನುವಾರ ಶ್ರದ್ಧಾಂಜಲಿ ಸಭೆ ನಡೆಯಿತು.

ಉಡುಪಿ, ಕಾರ್ಕಳ ಮತ್ತು ಮಂಗಳೂರು ಕೋರ್ಟ್ಗಳಲ್ಲಿ ವಕಾಲತ್ತು ನಡೆಸುತ್ತಿದ್ದ ಅತಿ ಕಿರಿಯ ವಯಸ್ಸಿನ ವಕೀಲೆ ಸುಲತಾ ಅವರು ಸಂಘದ ಚಟುವಟಿಕೆಗಳೊಂದಿಗೆ ಸ್ಥಳೀಯವಾಗಿ ಹಲವು ಸಾಮಾಜಿಕ ಸಂಘಟನೆಗಳೊAದಿಗೆ ಸಕ್ರಿಯರಾಗಿದ್ದರು. ಸುಲತಾ ಅವರು ಸರ್ಕಾರಿ ವಕೀಲರಾಗಿ ನೇಮಕಗೊಂಡು ಇನ್ನೇನು ಸರ್ಕಾರಿ ಸೇವೆ ಆರಂಭಿಸಬೇಕೆನ್ನುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಾರೆ. ೯ನೇ ತರಗತಿಯಲ್ಲಿ ಕಲಿಯುತ್ತಿರುವ ಇವರ ಏಕೈಕ ಪುತ್ರ ಹಾಗೂ ತಂದೆ-ತಾಯಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಂಘ ಭರವಸೆ ನೀಡಿತು. ಕುಕ್ಕಟ್ಟೆ ರಸ್ತೆಯೊಂದಕ್ಕೆ ಅಡ್ವಕೇಟ್ ಸುಲತಾ ಸಂತೋಷ್ ನಾಮಕರಣ ಮಾಡಲು ಪಂಚಾಯತ್‌ಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ತಾಲೂಕು ಮರಾಠಿ ಸೇವಾ ಸಂಘದ ಗೌರವಾಧ್ಯಕ್ಷ ವಿ. ಪಿ. ನಾಯ್ಕ್, ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಉಡುಪಿ ಜಿಲ್ಲೆಯ ವಕೀಲ ಸಹೋದ್ಯೋಗಿ ರಾಘವೇಂದ್ರ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಮತ್ತಿತರರು ಮಾತನಾಡಿದರು. ಗಂಜಿಮಠ ಪಂಚಾಯತ್ ಉಪಾಧ್ಯಕ್ಷೆ ಕುಮುದಾ ನಾಯ್ಕ್, ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ರವಿಪ್ರಸಾದ್, ಸಂಘದ ಪದಾಧಿಕಾರಿಗಳಾದ ಅಶೋಕ್ ನಾಯ್ಕ್, ಪುರಂದರ ನಾಯ್ಕ್, ಕೇಶವ ನಾಯ್ಕ್, ಸುಲತಾ ಕುಟುಂಬಿಕರು ಹಾಗೂ ನೂರಾರು ಮಂದಿ ಅಭಿಮಾನಿಗಳು ಇದ್ದರು. ಈ ಸಂದರ್ಭದಲ್ಲಿ ರವೀಂದ್ರ ನಾಯಕ್ ಕುಡುಪು ಅವರ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು.