ಜು. ೧ರಂದು ಮೆಲ್ಕಾರ್‌ನಲ್ಲಿ ಚಿಂತನ ಶಿಬಿರಸಮಾಜದ ಬೇಡಿಕೆಗೆ ಸರ್ಕಾರ ಶೀಘ್ರ ಸ್ಪಂದಿಸಲಿ :ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿ ಆಗ್ರಹ
ಕೈಕಂಬ : ಬಿಲ್ಲವ ಸಮುದಾಯದ ಹಿರಿಯ ರಾಜಕಾರಣಿ ಬಿ. ಜನಾರ್ದನ ಪೂಜಾರಿಯವರ ನಂತರ ಕಾಂಗ್ರೆಸ್ ಹಿರಿಯ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ, ಭ್ರಷ್ಟಾಚಾರರಹಿತ ರಾಜಕಾರಣಿಯಾಗಿರುವ ಬಿ. ಕೆ. ಹರಿಪ್ರಸಾದ್ ಅವರನ್ನು ಹೊಸ ಸರ್ಕಾರ ಕಡೆಗಣಿಸಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡುವುದರೊಂದಿಗೆ ಬಿಲ್ಲವ ಸಮುದಾಯದ ಇತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿಯ ಜಿಲ್ಲಾ ಸಂಘಟನೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಆಗ್ರಹಿಸಿದರು.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ೨೫೦ ಕೋ. ರೂ. ಅನುದಾನದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಕಾಂಗ್ರೆಸ್, ತಕ್ಷಣ ಆಶ್ವಾಸನೆ ಪೂರೈಸಿ ನಿಗಮಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡಬೇಕು. ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು. ಈಡಿಗ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕುಲಕಸುಬು ಸೇಂದಿ, ನೀರಾ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು. ವಿಧಾನಸೌಧದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಬೇಕು ಎಂದವರು ಒತ್ತಾಯಿಸಿದರು.
ಈಡಿಗ ಬಿಲ್ಲವ ಸಮುದಾಯದ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹಿಂದಿನ ಸರ್ಕಾರ ನೀಡಿದ ಕಾನೂನು ಗೊಂದಲ ನಿವಾರಿಸಬೇಕು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರಿಡಬೇಕು ಎಂದ ಜಿತೇಂದ್ರ ಸುವರ್ಣ, ಸಮಾಜದ ಗುರು ಡಾ. ಪ್ರಣವಾನಂದ ಸ್ವಾಮಿಯವರು ಸರ್ಕಾರದ ಮುಂದಿಟ್ಟಿರುವ ಈ ಎಲ್ಲ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕೇ ಹೊರತು ಕಾಟಾಚಾರಕ್ಕೆ ಭರವಸೆ ನೀಡಿದರೆ ಸಾಲದು. ಮಾತಿಗೆ ತಪ್ಪಿದಲ್ಲಿ ಹೋರಾಟ ತೀವ್ರಗೊಳಿಸಬೇಕಾದೀತು ಎಂದೆಚ್ಚರಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠ ಹಾಗೂ ರಾಷ್ಟ್ರೀ ಯ ಈಡಿಗ ಬಿಲ್ಲವ ಮಹಾಮಂಡಳಿಯ ಜಂಟಿ ಆಶ್ರಯದಲ್ಲಿ ಜುಲೈ ೧ರಂದು ಪಾಣೆಮಂಗಳೂರಿನ ಮೇಲ್ಕಾರನ ಬಿರುವ ಸೆಂಟರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳ ಒಂದು ದಿನದ ವಿಶೇಷ ಚಿಂತನ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಬಿಲ್ಲವ ಸಮುದಾಯ ಎದುರಿಸುತ್ತಿರುವ ಬಹುತೇಕ ಎಲ್ಲ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಜಿತೇಂದ್ರ ಜೆ. ಸುವರ್ಣ ಹೇಳಿದರು.
ಗೋಷ್ಠಿಯಲ್ಲಿ ರಾಷ್ಟ್ರೀ ಯ ಈಡಿಗ ಬಿಲ್ಲವ ಮಹಾಮಂಡಳಿಯ ರಾಜ್ಯಾಧ್ಯಕ್ಷ ಜಿ. ಎನ್. ಸಂತೋಷ್ ಕುಮಾರ್, ಬಿಲ್ಲವ ಸಂಘಟಕರಾದ ಸುರೇಶ್ಚಂದ್ರ ಕೋಟ್ಯಾನ್, ಲೋಕನಾಥ ಪೂಜಾರಿ ಮತ್ತು ಪಾರ್ವತಿ ಅಮೀನ್ ಉಪಸ್ಥಿತರಿದ್ದರು.