ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮೂರು ಶಾಲಾ ಮಕ್ಕಳಿಗೆ ಶ್ರೀ ವಿಜಯ ವಾಹಿನಿ ವೇದಿಕೆಯಿಂದ ಉಚಿತ ಪುಸ್ತಕ ವಿತರಣೆ
ಕೈಕಂಬ : ಗಂಜಿಮಠದ ಶ್ರೀ ವಿಜಯ ವಾಹಿನಿ ವೇದಿಕೆ(ರಿ) ವತಿಯಿಂದ ಸೋಮವಾರ(ಜು. ೩) ಗಂಜಿಮಠ ಪಂಚಾಯತ್ ವ್ಯಾಪ್ತಿಯ ಗಂಜಿಮಠ, ಸೂರಲ್ಪಾಡಿ ಮತ್ತು ಮಳಲಿ ಕುಕ್ಕಟೆಯ ಮೂರು ಶಾಲಾ ಮಕ್ಕಳಿಗೆ ಸುಮಾರು ೭೫ ಸಾವಿರ ರೂ. ಮೌಲ್ಯದ ಉಚಿತ ಬರೆಯುವ ಪುಸ್ತಕ, ಲೇಕನಿ ಸಾಮಗ್ರಿ ವಿತರಿಸಲಾಯಿತು.

ಗಂಜಿಮಠದ ದ.ಕ.ಜಿ.ಪಂ. ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸೂರಲ್ಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಳಲಿ ಕುಕ್ಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ೧-೭ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾದ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ, ತಾಪಂ ಮಾಜಿ ಸದಸ್ಯ ಜಿ. ಸುನಿಲ್ ಗಂಜಿಮಠ ಮಾತನಾಡಿ, ಒಂದೆರಡು ವರ್ಷದ ಹಿಂದಿನವರೆಗೆ ಖಾಸಗಿ ಶಾಲೆಗಳ ಭರಾಟೆಯಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ.

ವೇದಿಕೆಯಂತಹ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸುವ ಬರೆಯುವ ಪುಸ್ತಕ, ಶಾಲಾ ಬ್ಯಾಗ್ ಮತ್ತಿತರ ಸೊತ್ತುಗಳ ಸದುಪಯೋಗಪಡಿಸಿಕೊಂಡು, ಉತ್ತಮ ಫಲಿತಾಂಶ ತರುವುದರೊಂದಿಗೆ ಭವಿಷ್ಯದಲ್ಲಿ ಶಾಲೆ ಮತ್ತು ಸಮಾಜದ ಋಣ ತೀರಿಸಲು ಮನಸ್ಸು ಮಾಡಬೇಕು ಎಂದರು.

ಸಮಾರಂಭದಲ್ಲಿ ಗಂಜಿಮಠ ಪಂಚಾಯತ್ ಸದಸ್ಯೆ ಅನಿತಾ ಡಿ’ಸೋಜ, ಪಂಚಾಯತ್‌ನ ಮಾಜಿ ಸದಸ್ಯ ಸಮೀರ್ ಸೂರಲ್ಪಾಡಿ, ವೇದಿಕೆ ಅಧ್ಯಕ್ಷ ಜಿ. ಸುನಿಲ್ ಗಂಜಿಮಠ, ವೇದಿಕೆಯ ಸದಸ್ಯ ಜನಾರ್ದನ ಕುಲಾಲ್, ಗಂಜಿಮಠ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಿಯಾಜ್, ಉಪಾಧ್ಯಕ್ಷೆ ಸಬಿನಾ, ಸದಸ್ಯರಾದ ಹೈದರ್, ನವಾಜ್, ರಜಿಯಾ, ಮುಮ್ತಾಜ್, ತಬಸುಮಾ, ಪಿಂಟು ಕೇವತ್, ಮುಖ್ಯ ಶಿಕ್ಷಕಿ ಗ್ರೆಟ್ಟಾ ಡೊಟ್ಟಿ ವಾಸ್, ಅಂಗನವಾಡಿ ಕಾರ್ಯಕರ್ತೆ ಶ್ರೀಲತಾ, ಸೂರಲ್ಪಾಡಿ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿ ಸಿಂಥಿಯಾ ಎಫ್. ನೊರೊನ್ಹಾ, ಸುನಿತಾ, ಎಸ್‌ಡಿಎಂಸಿ ಅಧ್ಯಕ್ಷೆ ರಜಿಯಾ, ಅಂಗನವಾಡಿ ಕಾರ್ಯಕರ್ತೆಯರಾದ ಸುಮತಿ, ಶಾಲಿನಿ, ಶಿಕ್ಷಕಿ ಅಮೀನ್ ಫಾತಿಮಾ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಮೂರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರು ಸಹಕರಿಸಿದರು.