ದುರ್ವಾಸನೆ ಬೀರುವ ಅಣಬೆ ಫ್ಯಾಕ್ಟರಿ ವಿರುದ್ಧ
ಜೂ. ೮ಕ್ಕೆ ಪ್ರತಿಭಟನೆ ; ವಾಮಂಜೂರು ಬಂದ್
ಕೈಕಂಬ : ವಾಮಂಜೂರು ತಿರುವೈಲು ವಾರ್ಡ್ನ ಓಂಕಾರನಗರದಲ್ಲಿ ಕಾರ್ಯಾಚರಿಸುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ' ಹೆಸರಿನ ಅಣಬೆ ಫ್ಯಾಕ್ಟರಿ ಮುಚ್ಚುವಂತೆ ಆಗ್ರಹಿಸಿ ಜೂ. ೮ರಂದು ಬೆಳಿಗ್ಗೆ ೭ರಿಂದ ಫ್ಯಾಕ್ಟರಿ ಎದುರು
ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಫ್ಯಾಕ್ಟರಿ ಹೋರಾಟ ಸಮಿತಿ’ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರೆ, ಅಂದು(ಜೂ. ೮) ಸ್ವಯಂಪ್ರೇರಿತ `ವಾಮಂಜೂರು ಬಂದ್’ ನಡೆಯಲಿದೆ.

ಕಳೆದ ಎರಡು ವರ್ಷದಿಮದ ಅಣಬೆ ಫ್ಯಾಕ್ಟರಿಯಿಂದ ವಸತಿ ಪ್ರದೇಶಗಳಿಗೆ ಹೊರಸೂಸುವ ಭಾರೀ ಪ್ರಮಾಣದ ದುರ್ವಾಸನೆ ವಿರುದ್ಧ ಸ್ಥಳೀಯ ಅಂಬೇಡ್ಕರ್‌ನಗರ, ಆಶ್ರಯನಗರ, ತೊಪೆಕಲ್ಲು, ಜ್ಯೋತಿನಗರ, ಪರಾರಿ, ಕೊಳಕೆಬೈಲು, ಅಮೃತನಗರ, ದೇವಿಪ್ರಸಾದ್ ಕಂಪೌಂಡ್, ತಿರುವೈಲು, ಕೆಲರೈಕೋಡಿ, ಕೆಎಚ್‌ಬಿ ಲೇಔಟ್ ಮತ್ತಿತರ ಪ್ರದೇಶಗಳ ನಿವಾಸಿಗರು ಈಗಾಗಲೇ ಹಲವು ಬಾರಿ ಪ್ರತುಭಟನೆ ನಡೆಸಿ, ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರು. ಆದರೆ ಈವರೆಗೆ ಯಾವುದೇ ಇಲಾಖೆಯಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಕೊನೆಯದಾಗಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರು.
ಫ್ಯಾಕ್ಟರಿ ದುರ್ವಾಸನೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದರು. ತನಿಖಾ ವರದಿಯು ನಾಗರಿಕ ಪರವಾಗಿದ್ದರೂ, ಪ್ರಭಾವಿ ನಾಯಕರ ಒತ್ತಡಕ್ಕೆ ಮಣಿದಿರುವ ಡೀಸಿಯವರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸ್ಥಳೀಯರು ಮುಷ್ಕರ ಹಾಗೂ ಸ್ವಯಂಪ್ರೇರಿತ ಬಂದ್‌ಗೆ ನಿರ್ಧರಿಸಿದ್ದಾರೆ ಎಂದು ಸಮಿತಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಫ್ಯಾಕ್ಟರಿ ದುರ್ವಾಸನೆಯಿಂದ ಸ್ಥಳೀಯರ ಆರೋಗ್ಯ ಕೆಟ್ಟು ಹೋಗಿದೆ. ಬಾಣಂತಿಯರು, ಮಕ್ಕಳು, ವಯೋವೃದ್ಧರಿಗೆ ಉಸಿರಾಟದ ತೊಂದರೆ ಹಾಗೂ ವಾಂತಿ, ತಲೆಶೂಲೆ ಆರಂಭಗೊಂಡಿದೆ. ಶಾಲಾ ಮಕ್ಕಳಿಗೆ ಮನೆಯ ಹೊರಗಡೆ ಬಂದು ಓದಲು ಕಷ್ಟವಾಗುತ್ತಿದೆ. ಜನವಸತಿ ಪ್ರದೇಶದಲ್ಲಿರುವ ಈ ಫ್ಯಾಕ್ಟರಿಯ ಆಸುಪಾಸಿನಲ್ಲಿ ಧಾರ್ಮಿಕ ಕೇಂದ್ರಗಳು, ಶಾಲೆ, ಭಜನಾ ಮಂದಿರ, ಶ್ರದ್ಧಾ ಕೇಂದ್ರಗಳು ಇದ್ದು, ಇಲ್ಲೆಲ್ಲ ಜನರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿ ಹೋರಾಟ ನಡೆಸುತ್ತಿದ್ದಾರೆ.
ಶಾಸಕ ಡಾ. ಭರತ್ ಶೆಟ್ಟಿ, ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಹಾಗೂ ಸ್ಥಳೀಯ ಮುಖಂಡರು ಸ್ಥಳೀಯ ನಿವಾಸಿಗರಿಗೆ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಕೈಜೋಡಿಸಿದ್ದಾರೆ.