ಗುರುಪುರ : ಎನ್‌ಎಚ್(೧೬೯) ಚತುಷ್ಪಥ ಕಾಮಗಾರಿಯಲ್ಲಿ ಎಡವಟ್ಟು
ತೋಡುಗಳ ನಿರ್ಮಾಣದಿಂದ ತೋಟಗಳು ಮುಳುಗಡೆ ಭೀತಿ
ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮಗಳ ಗಡಿಪ್ರದೇಶವಾದ ಬೆಳ್ಳೂರು, ಮಾಣಿಬೆಟ್ಟು, ಕಾರಮೊಗರು ಆಸುಪಾಸಿನ ಸುಮಾರು ೫೦ ಎಕ್ರೆ ತಗ್ಗು ಪ್ರದೇಶಗಳಲ್ಲಿ ಅಡಕೆ, ತೆಂಗಿನ ತೋಟಗಳು ಹಾಗೂ ಭತ್ತದ ಗದ್ದೆಗಳು ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದ್ದು, ಸ್ಥಳೀಯ ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಗುಡ್ಡದ ನೀರು ಹರಿದು ಹೋಗುವ ಹೆದ್ದಾರಿಯ ಬೆಳ್ಳೂರು-ಮಾಣಿಬೆಟ್ಟು ಪ್ರದೇಶದಲ್ಲಿದ್ದ ಒಂದು ಪರಂಬೋಕು(ಸರ್ವೇ ನಂಬ್ರ ೨೮/೧೩, ೩/೪, ೪/೪) ತೋಡು ಮುಚ್ಚಿ, ಅದರ ಮೇಲ್ಗಡೆ ಹೆದ್ದಾರಿ ನಿರ್ಮಿಸಲಾಗಿದೆ. ಅದೇ ಜಾಗದಲ್ಲಿರುವ ಮತ್ತೊಂದು ಪರಂಬೋಕು ತೋಡಿನ ನೀರು ಹರಿದು ಹೋಗಲು ಹೆದ್ದಾರಿಯ ಅಡಿಯಲ್ಲಿ ಅತಿ ಸಣ್ಣ ಪೈಪ್ ಅಳವಡಿಸಲಾಗಿದೆ. ಪರಿಣಾಮ, ಹೆದ್ದಾರಿ ಎತ್ತರವಾಗಿ, ಎರಡೂ ಕಡೆಯಲ್ಲಿ ಗುಡ್ಡದ ನೀರು ಫಲ್ಗುಣಿ ನದಿಗೆ ಸರಾಗವಾಗಿ ಹರಿಯದೆ ಪರಿಸರದಲ್ಲಿ ಕೃತಕ ನೆರೆ ಉಂಟಾಗಲಿದೆ ಮತ್ತು ಅಲ್ಲಿರುವ ತೋಟಗಳು ಮುಳುಗಡೆಯಾಗಲಿವೆ.

ಮಾಣಿಬೆಟ್ಟಿನ ಮೂಲಕ ಎರಡು ದೊಡ್ಡ ಪರಂಬೋಕು ತೋಡುಗಳ ಮೂಲಕ ಹರಿಯುವ ಮಳೆ ನೀರು `ಸೂಂಬುದಬಾಕಿಲ್’ ಎಂಬಲ್ಲಿ ಒಂದೇ ತೋಡಿನ ಮೂಲಕ ಕಾರಮೊಗರು ಮೂಲಕ ನದಿಗೆ ಸೇರುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವ ತೋಡಿಗೆ ಚಿಕ್ಕದಾದ ಸಿಮೆಂಟ್ ಪೈಪ್ ಅಳವಡಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಸ್ಥಳೀಯ ಮನೆಗಳಿಗೂ ನೀರು ಪ್ರವೇಶಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ವ್ಯಾಜ್ಯವಿದ್ದಲ್ಲೂ ಕಾಮಗಾರಿ :

`ಅಡ್ಡೂರು ಗ್ರಾಮದ ಸರ್ವೇ ನಂಬ್ರ ೪ರ ವ್ಯಾಪ್ತಿಯ ಜಾಗದ ಪರಿಹಾರ ತಾರತಮ್ಯದ ಪ್ರಶ್ನಿಸಿ ಕೋರ್ಟಿನಲ್ಲಿ ತರಕಾರು ಇದ್ದರೂ, ಗುತ್ತಿಗೆ ಕಂಪೆನಿಯು ಸ್ಥಳೀಯರ ಆಕ್ಷೇಪ ಧಿಕ್ಕರಿಸಿ ರಸ್ತೆ ನಿರ್ಮಿಸಿದೆ. ಪರಂಬೋಕು ತೋಡು ಇರುವ ತಗ್ಗುಪ್ರದೇಶದಲ್ಲಿ ಚರಂಡಿ ನಿರ್ಮಿಸಿಲ್ಲ.
ಭೂ-ಪರಿವರ್ತನೆ’ ಅವಧಿ ಮುಗಿದಿದ್ದರೂ, ಕೆಲವರ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕಂದಾಯ ಇಲಾಖಾಧಿಕಾರಿಗಳು ಅವಕಾಶ ನೀಡಿದ್ದಾರೆ. ಇದರಿಂದ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೃಷಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಮೊತ್ತದಲ್ಲಿ ಅನ್ಯಾಯವಾಗಿದೆ. ಇದೇ ವಿಷಯದಲ್ಲಿ ಅವರೆಲ್ಲ ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ.” ಎಂದು ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಬೆಳ್ಳೂರುಗುತ್ತು ಹೇಳಿದರು.

“ಈಗ ಹೆದ್ದಾರಿ ನಿರ್ಮಾಣವಾಗುತ್ತಿರುವ ಮಾಣಿಬೆಟ್ಟು ಪ್ರದೇಶ ೧೯೭೪ರ ಪ್ರವಾಹದಿಂದ ಮುಳುಗಡೆಯಾಗಿತ್ತು. ಇಲ್ಲಿ ಕಾಮಗಾರಿ ವೇಳೆ ತಗ್ಗುಪ್ರದೇಶದ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಈ ಬಾರಿ ಸಣ್ಣ ಮಳೆಗೆ ನಮ್ಮ ಮನೆ ಜಲಾವೃತವಾಗಲಿದೆ. ಇಲ್ಲಿ ನಮ್ಮ ಹಿರಿಯರಿದ್ದು, ಸುಮಾರು ೧೦೦ ವರ್ಷಗಳಿಂದ ವಾಸಿಸುತ್ತಿದ್ದೇವೆ” ಎಂದು ಗುರುಪುರ ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ಹಾಗೂ ದಲಿತ ಕುಟುಂಬದ ಸುಜಯಾ ಭೀತಿ ವ್ಯಕ್ತಪಡಿಸಿದ್ದಾರೆ.

“ನಮ್ಮ ಕೃಷಿ ತೋಟಕ್ಕೆ ನೀರು ಬೀಳಲಿದೆ. ಕಂಗು ಮತ್ತು ತೆಂಗಿನ ತೋಟಕ್ಕೆ ಅಪಾಯ ಕಾದಿದ್ದು, ಭತ್ತದ ಗದ್ದೆಗಳು ಮುಳುಗಡೆಯಾಗಲಿವೆ. ಹೆದ್ದಾರಿಯ ಕೆಲವು ಕಡೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ. ಗುಡ್ಡದ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಹೆದ್ದಾರಿ ತೋಡಿಗೆ ೪ ಅಡಿ ಸುತ್ತಳತೆಯ ಪೈಪ್ ಅಳವಡಿಸುವ ಬದಲಿಗೆ ದೊಡ್ಡ ಪೈಪ್ ಅಥವಾ ಎರಡು ಪೈಪ್ ಅಳವಡಿಸಬೇಕಿತ್ತು. ಯಾಕೆಂದರೆ, ಅಡ್ಡೂರು-ಮೂಳೂರು ಗ್ರಾಮ ಸಂಧಿಸುವ ಪರಂಬೋಕು ತೋಡುಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತದೆ. ತೋಡಿನ ನೀರಿಗೆ ತಡೆಯಾದಲ್ಲಿ ಪರಿಸರದ ರೈತರು ಹಾಗೂ ಇತರರು ಸಂಕಷ್ಟಕ್ಕೀಡಾಗುವುದು ಗ್ಯಾರಂಟಿ” ಎಂದು ಮಾಣಿಬೆಟ್ಟಿನ ಕೃಷಿಕ ವಿನಯ್ ಕುಮಾರ್ ಶೆಟ್ಟಿ ಹೇಳಿದರು.
ಧನಂಜಯ ಗುರುಪುರ