ಆಟಿ ತಿಂಗಳ ವಿಶೇಷತೆಯಲ್ಲಿ ಒಂದಾದ ಆಟಿ ಅಮಾವಾಸ್ಯೆಯನ್ನು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲೆ ಮರದ ಕಷಾಯ ಮಕ್ಕಳಿಗೆ ನೀಡುವುದರ ಮೂಲಕ ಆಚರಿಸಲಾಯಿತು.
ಹಾಲೆಯ ಕಷಾಯದ ವಿಶೇಷತೆಯನ್ನು ವಿವರಿಸುತ್ತಾ “ಈ ಕಷಾಯ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯು ವೃದ್ಧಿಯಾಗುತ್ತದೆ.
ಹಾಲೆಯ ಮರದ ಬೇರು ಪಾತಾಳದವರೆಗೆ ಹೋಗಿ ಹೀರಿದ ಸತ್ವ ಇರುವುದರಿಂದ ಔಷದಿಯ ಗುಣವು ಯತೇಚ್ಛವಾಗಿ ಇರುತ್ತದೆ. ನಸುಕಿನಲ್ಲಿ ಹಾಲೆಯ ಮರದ ಕೆತ್ತೆಯನ್ನು ಕಲ್ಲಿನಿಂದ ಜಜ್ಜಿ ತರುತ್ತಾರೆ. ಇದರಲ್ಲಿ ಉಷ್ಣ- ಪಿತ್ತದಿಂದ ಕೂಡಿದ ಅಂಶವಿರುವುದರಿಂದ ಮೆಂತೆ-ತೆಂಗಿನಕಾಯಿ ಅನ್ನ ಮಾಡಿ ತಿಂದು ದೇಹವನ್ನು ತಂಪಾಗಿಸುವುದು ಪದ್ದತಿ ಹಾಗೂ ಇಂತಹ ಮರಗಳ ಮಹತ್ವಗಳನ್ನು ಅರಿತು ಕೊಳ್ಳುವುದರಿಂದ ವೃಕ್ಷಸಂರಕ್ಷಣೆಯ ಜಾಗೃತಿಯೂ ಮಕ್ಕಳಲ್ಲಿ ಮೂಡಬೇಕು” ಎಂದು ಆಂಗ್ಲಭಾಷಾ ಶಿಕ್ಷಕರಾದ ಸುಮಂತ್ ಆಳ್ವ ತಿಳಿಸಿದರು.
ಶಿಕ್ಷಕಿಯಾದ ಲತಾರವರು ಕಷಾಯ, ಮೆಂತೆಗಂಜಿ ಹಾಗೂ ಓಲೆಬೆಲ್ಲ, ಹಾಲೆಕಷಾಯ ಕುಡಿಯದ ವಿದ್ಯಾರ್ಥಿಗಳಿಗೆ ವಿತರಿಸಿದರು. ಜೊತೆಗೆ ಚೈತ್ರಾ ಎನ್ ಕೆ ಸಹಕರಿಸಿದರು.
“ಕಷಾಯ ಕುಡಿದು, ಅದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿರುವುದರಿಂದ ಮರದಲ್ಲಿರುವಂತಹ ಔಷಧೀಯ ಗುಣಗಳ ಮಾಹಿತಿ ತಿಳಿಯಿತು” ಎಂದು ವಿದ್ಯಾರ್ಥಿಯಾದ ನಿಶಾಂತ್.ಡಿ.ಅಮ್ಟೂರು ಹೇಳಿದರು. ಹಾಗೆಯೇ ವಸತಿ ನಿಲಯದ ವಿದ್ಯಾರ್ಥಿಗಳು ಮಾಹಿತಿ ಜೊತೆ ಕಷಾಯ ಕುಡಿದು ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

