ಬೆಳ್ಳೂರು : ಬಡಗಬೆಳ್ಳೂರು ವಲಯ ಬಂಟರ ಸಂಘ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾದ `ಆಟಿದ ಕೂಟ’ವು ಗ್ರಾಮದ ನೂರಾರು ಮಂದಿ ಪಾಲ್ಗೊಳ್ಳುವುದರೊಂದಿಗೆ ಅದ್ದೂರಿಯಾಗಿ ಜರುಗಿತು.ದೀಪ ಬೆಳಗಿಸಿ ಕೂಟ ಉದ್ಘಾಟಿಸಿದ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ರೈ ನಗ್ರಿಗುತ್ತು ಮಾತನಾಡುತ್ತ, ಏರ್ಯ ಲಕ್ಷ್ಮೀನಾರಾಯಣ ಆಳ್ವರ ಗುಣಗಾನ ಮಾಡುತ್ತ, ಅವರ ಆಶೋತ್ತರದಂತೆ ಬಂಟ್ವಾಳ ವಲಯ ಬಂಟರ ಸಂಘಗಳ ಇಂತಹ ಕಾರ್ಯಕ್ರಮ ಮುಂದುವರಿಸಲು ನಿರ್ಧರಿಸಿದ್ದೇವೆ. ತುಳುನಾಡ ತಿಳಿಯಪಡಿಸುವ ಆಟಿದ ಕೂಟಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಇದರಿಂದ ಮುಂದಿನ ಪೀಳಿಗೆಗೆ ಆಟಿದ ಮಹತ್ವ ತಿಳಿಯಲಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡುತ್ತ, ಬಂಟರು ಸಂಸ್ಕøತಿ, ಕಟ್ಟುಪಾಡು ಉಳಿಸುವ ಪ್ರಯತ್ನ ಮಾಡಬೇಕು. ಬಂಟರು ಯಾವತ್ತೂ ಜಾತಿ, ಧರ್ಮ, ಭಾಷೆಯ ದ್ವೇಷ ಇಟ್ಟುಕೊಂಡಿಲ್ಲ. ಆಟಿ ಇರಲಿ ಅಥವಾ ಇತರ ಸಂದರ್ಭವಿರಲಿ ಒಗ್ಗೂಡಿ ಬದುಕುವುದು ನಮ್ಮ ಧರ್ಮವಾಗಬೇಕು ಎಂದರು.
ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡುತ್ತ, ತುಳುನಾಡಿನಲ್ಲಿ ಬಂಟರ ಸಹಿತ ಇತರ ಸಮಾಜದವರು ಆಟಿ ಹೊರತುಪಡಿಸಿ ಉಳಿದ ತಿಂಗಳುಗಳಲ್ಲಿ ಕೃಷಿ, ಬ್ರಹ್ಮಕಲಶ, ನಾಗಮಂಡಲ…ಹೀಗೆ ಅನೇಕಾನೇಕ ಅಂಕ-ಆಯನ, ವೃತ್ತಿಪರ ಕೆಲಸಗಳಲ್ಲಿ ಸಕ್ರಿಯರಾಗಿರುತ್ತಾರೆ. ಆಟಿಯಲ್ಲಿ ಬಿಡುವಿದೆ. ಇದು ಎಲ್ಲರೂ ಒಟ್ಟಾಗುವ ತಿಂಗಳಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ರಾಜೇಶ್ ಹೆಗ್ಡೆ, ಕೆ ಧನಂಜಯ ರೈ, ದೇವಿಚರಣ್ ಶೆಟ್ಟಿ, ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾಪ್ರಸಾದ್ ರೈ, ಬೆಳ್ಳೂರು ವಲಯದ ಬಂಟರ ಸಂಘದ ಉಪಾಧ್ಯಕ್ಷೆ ಸಂಧ್ಯಾ ರೈ ಕರುಣಾಕರ ಶೆಟ್ಟಿ, ಸುಧೀರ್ ಪೂಂಜ ಮೊದಲಾದವರಿದ್ದರು. ಪುಷ್ಪರಾಜ ಶೆಟ್ಟಿ ಕಮ್ಮಾಜೆ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರೆ, ನರೇಶ್ ಕುಮಾರ್ ಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಡಗಬೆಳ್ಳೂರು, ತೆಂಕಬೆಳ್ಳೂರು, ಕೂರಿಯಾಳ, ಅಮ್ಮುಂಜೆ ಗ್ರಾಮದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಬೆಳ್ಳೂರು ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಕೂಟದಲ್ಲಿ ಕಬ್ಬಡಿ, ಹಗ್ಗ-ಜಗ್ಗಾಟ, ಅದೃಷ್ಟದ ಆಟ ಆಯೋಜಿಸಲಾಗಿತ್ತು.

