ಹೊಸದಿಲ್ಲಿ: ಇರಾಕ್ ನ ಮೊಸಲ್ ನಲ್ಲಿ ಹತ್ಯೆಗೀಡಾದ 39 ಜನ ಭಾರತೀಯರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
2014 ರಲ್ಲಿ ಕಾಣೆಯಾಗಿದ್ದ 39 ಜನ ಭಾರತೀಯರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಂದ ಹತ್ಯೆಗೊಳಗಾಗಿದ್ದರು. ಅವರ ಪೈಕಿ 38 ಜನರ ಪಾರ್ಥಿವ ಶರೀರಗಳನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್ ಸೋಮವಾರವಷ್ಟೇ ಇರಾಕ್ ನಿಂದ ತಂದು, ಸಂಬಂಧಿಗಳಿಗೆ ಹಸ್ತಾಂತರಿಸಿದ್ದಾರೆ.
ಪಂಜಾಬ್ ಗೆ ಸೇರಿದ 27 ಮಂದಿಯ ಕುಟುಂಬಗಳಿಗೆ ಅಲ್ಲಿನ ಸರಕಾರ ಈಗಾಗಲೇ 5 ಲಕ್ಷ ರೂ. ಗಳ ಪರಿಹಾರ ಘೋಷಿಸಿದೆ. ಇದೀಗ ಕೇಂದ್ರ ಸರಕಾರ 10 ಲಕ್ಷ ರೂ. ಗಳ ನೆರವು ಪ್ರಕಟಿಸಿದೆ.

