ಬಜ್ಪೆ: ವಿಮಾನವೊಂದು ಮೇಲೇರಲು ಸಜ್ಜಾಗುತ್ತಿದ್ದ ವೇಳೆ ಇಂಜಿನ್‍ನಲ್ಲಿ ಹಠಾತ್ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಹಾರಾಟ ರದ್ದಾದ ಘಟನೆ ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ಬೆಳಗ್ಗೆ 8.50ರ ವೇಳೆ 31 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್‍ಗೆ ತೆರಳಬೇಕಿತ್ತು. ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದಾಗ ವಿಮಾನದ ಇಂಜಿನ್‍ನಲ್ಲಿ ತಾಂತ್ರಿಕ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಳ್ಳುವ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ಮತ್ತು ತುರ್ತು ಕಾರ್ಯಾಚರಣೆ ವಿಭಾಗದ ಅಧಿಕಾರಿಗಳು ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಿ, ಹೊಗೆಯನ್ನು ಶಮನ ಮಾಡಿದರು. ಇದರಿಂದ ಅನಾಹುತ ತಪ್ಪಿದಂತಾಗಿದೆ.

