ಕಟೀಲು: ಹಲ್ಲೆ ಹಾಗೂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಜಪೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಟೀಲ್ ನ ಅಜಾರು ನಿವಾಸಿ ಸಚಿನ್ ಹಾಗೂ ತಮಿಳುನಾಡು ಮೂಲದ ಮಾರಿಯಪ್ಪನ್ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?: ಕಟೀಲ್ನಲ್ಲಿ ನಡೆಯುತ್ತಿರುವ ಜಾತ್ರೆಗೆ ವ್ಯಾಪಾರಕ್ಕೆಂದು ಬಂದಿದ್ದ ಸುಳ್ಯ ಹಾಗೂ ಉತ್ತರ ಭಾರತದ ಮೂಲದ ಇಬ್ಬರು ವ್ಯಾಪಾರಿಗಳ ಮೇಲೆ ಆರೋಪಿಗಳಾದ ಸಚಿನ್, ಮಾರಿಯಪ್ಪನ್ ತಡರಾತ್ರಿ ಹಲ್ಲೆ ನಡೆಸಿ, ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳನ್ನು ಕಟೀಲ್ ನ ಗಿಡಿಗೆರೆಯಲ್ಲಿ ಬಂಧಿಸಿ 10,300 ನಗದನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಾರಿಯಪ್ಪನ್ ಮೇಲೆ ಈ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ 6 ವರ್ಷ ಕಠಿಣ ಸಜೆ ಅನುಭವಿಸಿದ್ದ.

