ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಐತಿಹಾಸಿಕ ಪ್ರಸಿದ್ಧ ಬಾಲೇಶ್ವರ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು.

ಆರಂಭದಲ್ಲಿ ಬ್ರಹ್ಮಬೈದರ್ಕಳರು ಒಲಿಮರೆಯಿಂದ ಹೊರಟು ದರ್ಶನ ಬಳಿಕ ಇಳಿಜಾರಿನ ಮೆಟ್ಟಿಲು ಮೂಲಕ ಬಾಕಿಮಾರು ಗದ್ದೆಗೆ ಇಳಿಯುವ ದೃಶ್ಯ ಮನಮೋಹಕವಾಗಿತ್ತು. ಇಲ್ಲಿನ ಬ್ರಹ್ಮಬೈದರ್ಕಳರು ಬಾಕಿಮಾರು ಗದ್ದೆಗೆ ಇಳಿಯುವ ದೃಶ್ಯ ವೀಕ್ಷಿಸಲು ಸಹಸ್ರಾರು ಮಂದಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದರು. ಇದೇ ವೇಳೆ ಕಡಸಾಲೆ ಬಲಿ, ಬ್ರಹ್ಮರ ಬಲಿ, ಬ್ರಹ್ಮಬೈದರ್ಕಳರು ಸುರ್ಯ ಹಾಕಿಕೊಂಡ ಬಳಿಕ ಮಾಯಂದಾತಿ ದೇವಿ ಉತ್ಸವ ನಡೆಯಿತು.

ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಚಂದನಾದೇವಿ ಡಾ.ಎನ್.ಪದ್ಮರಾಜ್ ಜೈನ್, ಬಿ.ಭರತ್ ಕುಮಾರ್ ರೈ, ರಘುಚಂದ್ರ ಚೌಟ, ಕೋಟಿ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಪ್ರಕಾಶ್ ಕುಮಾರ್ ಜೈನ್, ಪ್ರಮುಖರಾದ ಶ್ರೀಪತಿ ಭಟ್, ಕೃಷ್ಣರಾಜ್ ಜೈನ್, ಕೆ.ಎನ್.ಶೇಖರ್ ಮತ್ತಿತರರು ಇದ್ದರು. ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣೆ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.
