ಉಡುಪಿ: ಮಹಾದಾಯಿ ವಿಚಾರದಲ್ಲಿ ಗೋವ ಸಿಎಂ ಮನೋಹರ್ ಪರಿಕ್ಕರ್ ಅವರನ್ನು ನಾವು ಮನವೊಲಿಸ್ತೇವೆ ಎಂದು ಕೇಂದ್ರ ಮಾವನ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕರ್ನಾಟಕಕ್ಕೆ ಕುಡಿಯುವ ನೀರು ಬಿಡುತ್ತೇವೆ ಎಂದಿದ್ದ ಮೇಲೆಯೂ ರಾಜ್ಯ ಸರಕಾರ ಅವರಿಗೆ ವಂದನೆ ಹೇಳುವ ಬದಲು ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತಿದೆ. ಸಾಧ್ಯವಾದರೆ ಕಾಂಗ್ರೆಸ್ ನಾಯಕರು ಮಹಾದಾಯಿ ವಿಚಾರದಲ್ಲಿ ಗೋವಾ ವಿಪಕ್ಷ ನಾಯಕರನ್ನು ಮನವೊಲಿಸಲಿ. ರಾಜ್ಯ ಸರಕಾರದ ಎಲ್ಲ ನಿಲುವಿಗೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉನ್ನತ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಇದಕ್ಕೆ ವಿದ್ಧವಾಗಿ ನಡೆದ ಅಧಿಕಾರಿಗಳನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಅಲ್ಲದೆ, ರಾಜ್ಯ ಸರಕಾರ ಚುನಾವಣಾ ಆಯೋಗದ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ನೂರು ದಿನಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂದು ಜಾವೇಡ್ಕರ್ ಟೀಕಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಅಂಗಾರ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮತ್ತಿತರರಿದ್ದರು.


