ಸುದ್ದಿ9ಬಳ್ಳಾರಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಆಂತರಿಕವಾಗಿ ಅಸಮಾಧಾನ ಇದ್ದರೂ ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಿ ಕೇವಲ ಲೆಕ್ಕಾಚಾರದಲ್ಲಿ ಗೆಲ್ಲುವ ಕನಸು ಕಂಡಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣೆಯಲ್ಲಿ ಬುದ್ಧಿ ಕಲಿತಂತೆ ಕಾಣುತ್ತಿದೆ. ಇದೀಗ ಡಿ.ಕೆ.ಶಿವಕುಮಾರ್ ಉಸ್ತುವಾರಿಯಲ್ಲಿ ಪ್ರಚಾರಕ್ಕೆ ಮುಂದಾಗುವ ಮೂಲಕ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಫಲಿತಾಂಶದ ಇತಿಹಾಸವನ್ನು ಬದಲು ಮಾಡಲು ಹೊರಟಿದ್ದಾರೆ. ಇದಕ್ಕೆ ಶ್ರೀರಾಮುಲು ಅವರ ಬಿಜೆಪಿ ಯಾವ ರೀತಿ ಪ್ರತಿತಂತ್ರ ಹೂಡಿ ತನ್ನ ಸ್ಥಾನ ಕಾಪಾಡಿಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಗುರುವಾರದಿಂದಲೇ ಚುನಾವಣೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಕ್ಷೇತ್ರದ ಉಸ್ತುವಾರಿ ವಹಿಸಿರುವ ಸಚಿವರನ್ನು ಮುಂದಿಟ್ಟುಕೊಂಡು ಚುನಾವಣೆಯ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಶುರುವಿನಲ್ಲಿ ಅಸಮಾಧಾನಗೊಂಡಿದ್ದ ಮುಖಂಡರ ಮನವೊಲಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ. ಇದು ಕಾರ್ಯಕರ್ತರಲ್ಲಿ ಉಲ್ಲಾಸ ಉಂಟು ಮಾಡಿದೆ. ತೀವ್ರ ಪೈಪೋಟಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತದಾರರು 2008ರಿಂದ ಪ್ರತಿ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಕೈ ಬಿಟ್ಟಿಲ್ಲ. ಶ್ರೀರಾಮುಲು ಅವರ ತೆಕ್ಕೆಯಿಂದ ಕ್ಷೇತ್ರವನ್ನು ಬಿಡಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅಷ್ಟು ಸುಲಭವಲ್ಲದಿದ್ದರೂ, ಅದಕ್ಕಾಗಿ ಶತಾಯಗತಾಯ ಪ್ರಯತ್ನಕ್ಕೆ ಮುಂದಾಗಿದೆ. ಡಿಕೆಶಿ ನಾಯಕತ್ವದಿಂದಲೇ ಇಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನಲಾಗದು. ಆದರೆ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಪ್ರಚಾರಕ್ಕೆ ತೆರಳುತ್ತಿರುವುದು ಬಿಜೆಪಿ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮತದಾರರ ಮೇಲೆ ಪರಿಣಾಮ ಬೀರಿದರೆ ಬಿಜೆಪಿ ಗೆಲುವು ಕಷ್ಟವಾಗಲಿದೆ. ಲೋಕಸಭೆ ಚುನಾವಣೆ ಶ್ರೀರಾಮುಲು ಅವರಿಗೆ ಮೋದಿ ಅಲೆಯ ನಡುವೆಯೂ ಗ್ರಾಮೀಣ ಕ್ಷೇತ್ರ ನೀಡಿದ್ದು ಕೇವಲ 9 ಸಾವಿರ ಲೀಡ್. ಈ ಬಾರಿ ಅವರ ಪಿಎ ಓಬಳೇಶ್ ಕಣದಲ್ಲಿದ್ದಾರೆ. ಹೀಗಾಗಿ ತಮ್ಮ ಬೆಂಬಲಿಗನನ್ನು ಗೆಲ್ಲಿಸಲು ಶ್ರೀರಾಮುಲು ಯಾವ ತಂತ್ರಗಳನ್ನು ಉಪಯೋಗಿಸುತ್ತಾರೆ ಎನ್ನುವುದನ್ನು ಮನಗಂಡು ಕಾಂಗ್ರೆಸ್ ತಂತ್ರ ಹೆಣೆಯಬೇಕಿದೆ. ಅದಕ್ಕಾಗಿಯೇ ಕಾಂಗ್ರೆಸ್ ಡಿಕೆಶಿ ಅವರಿಗೆ ಇಲ್ಲಿನ ಉಸ್ತುವಾರಿ ವಹಿಸಿರುವುದು.

 

By Suddi9

Leave a Reply

Your email address will not be published. Required fields are marked *