ಸುದ್ದಿ9ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಒಬ್ಬ ವ್ಯಕ್ತಿಯಾಗಲೀ, ಒಂದು ಪಕ್ಷವಾಗಲೀ, ಒಂದು ಸಂಘಟನೆಯಾಗಲೀ ಕಾರಣವಲ್ಲ. ಜನರು ಬದಲಾವಣೆ ಬಯಸಿದ್ದರು. ಹೀಗಾಗಿ, ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಬಿಜೆಪಿಗೆ ಗೆಲುವಿಗೆ ಅಮಿತ್ ಶಾ ಕಾರಣ ಎಂದು ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಈ ಪ್ರತಿಕ್ರಿಯೆ ನೀಡಿರುವುದು ಕುತೂಹಲ ಕೆರಳಿಸಿದೆ. ನಿನ್ನೆ ರಕ್ಷಾ ಬಂಧನ್ ಉತ್ಸವದ ವೇಳೆ ಸರಸಂಘಚಾಲಕರು ಈ ಮಾತುಗಳನ್ನಾಡಿದ್ದಾರೆ. ಇದು ಮೋದಿ ಟೀಮ್ ಮತ್ತು ಆರೆಸ್ಸೆಸ್ ನಡುವೆ ಅಂತರ ಬೆಳೆಯುತ್ತಿರುವುದರ ಸೂಚಕವೋ..? ಅಥವಾ ಮೋದಿಯವರಿಗೆ ಆರೆಸ್ಸೆಸ್ ಕಿವಿ ಹಿಂಡಲು ಯತ್ನಿಸುತ್ತಿರುವುದರ ಸಂಕೇತವೋ..? ಎಂಬ ಪ್ರಶ್ನೆಗಳಂತೂ ಆವರಿಸಿದೆ. ಭಾಗವತ್ ಹೇಳಿದ್ದೇನು..? “ಪಕ್ಷದ ಪ್ರಭಾವದಿಂದ ಚುನಾವಣೆಯಲ್ಲಿ ಯಶಸ್ಸು ಸಿಕ್ಕಿತೆಂದು ಕೆಲ ವ್ಯಕ್ತಿಗಳು ಹೇಳುತ್ತಾರೆ. ಇದು ಕೆಲ ವ್ಯಕ್ತಿಗಳಿಂದಾಗಿ ಗೆಲುವು ಸಿಕ್ಕಿತೆಂದು ಇನ್ನೊಂದಿಷ್ಟು ಜನರು ಹೇಳುತ್ತಾರೆ. ಆದರೆ, ಈ ಬದಲಾವಣೆ ಯಾವುದೇ ಕೆಲ ವ್ಯಕ್ತಿಗಳಿಂದಾಗಲೀ, ಪಕ್ಷದಿಂದಾಗಲೀ ಅಥವಾ ಸಂಘಟನೆಯಿಂದಾಲೀ ಅಲ್ಲ. ಜನಸಾಮಾನ್ಯರಿಗೆ ಬದಲಾವಣೆ ಬೇಕಾಗಿತ್ತು..” “ಇದೇ ವ್ಯಕ್ತಿಗಳು ಮತ್ತು ಪಕ್ಷ ಈ ಮುಂಚೆಯೂ ಇದ್ದವು. ಆಗ ಯಾಕೆ ಅವರು ಅಧಿಕಾರಕ್ಕೆ ಬರಲಿಲ್ಲ..?ಈಗ ಜನರಿಗೆ ಸಮಾಧಾನಸಿಗಲಿಲ್ಲವೆಂದಾದರೆ ಈ ಸರ್ಕಾರವೂ ಬದಲಾಗುತ್ತದೆ” ಮೋದಿ ಹೇಳಿದ್ದೇನು..? ಶನಿವಾರ ನಡೆದ ಬಿಜೆಪಿ ನಾಯಕತ್ವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಯಶಸ್ಸಿನ ಬಗ್ಗೆ ತಮ್ಮದೇ ವಿಶ್ಲೇಷಣೆ ಮಾಡಿದ್ದರು. “ರಾಜನಾಥ್ ಸಿಂಗ್ ಕ್ಯಾಪ್ಟನ್ಸಿಯಲ್ಲಿ ಪಕ್ಷದ ಕಾರ್ಯಕರ್ತರು ಗೆಲುವಿನ ಪತಾಕೆ ಹಾರಿಸಿದರು. ಆದರೆ, ಪಂದ್ಯ ಪುರುಷೋತ್ತಮ ಅಮಿತ್’ಭಾಯ್ ಶಾ ಅವರೇ” ಎಂದು ಮೋದಿ ಉಸುರಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಉತ್ತರಪ್ರದೇಶದ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿದ್ದರು. ಆ ರಾಜ್ಯದಲ್ಲಿದ್ದ 80 ಲೋಕಸಭಾ ಸ್ಥಾನಗಳ ಪೈಕಿ 71 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಎಲ್ಲರನ್ನೂ ಬೆರಗಾಗಿಸಿತ್ತು. ಅಮಿತ್ ಶಾ ಅವರ ಸಂಘಟನಾ ಸಾಮರ್ಥ್ಯದಿಂದಾಗಿ ಬಿಜೆಪಿಗೆ ಇಲ್ಲಿ ಇಂಥ ಅಭೂತಪೂರ್ವ ಗೆಲುವು ಸಿಗಲು ಕಾರಣವಾಗಿದೆ ಎಂಬಂಥ ಮಾತುಗಳು ಕೇಳಿಬರುತ್ತವೆ.

