ಬೀಜಿಂಗ್: ಚೀನದ ಪ್ರಕ್ಷುಬ್ಧ ಪ್ರಾಂತ್ಯವಾದ ಕ್ಸಿಂಜಿಯಾಂಗ್ನ ನಗರದಲ್ಲಿ ಪ್ರಾಂತ್ಯದ ಕಶಾರ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಪೊಲೀಸರ ಪ್ರತಿದಾಳಿಯಲ್ಲಿ 100 ಮಂದಿ ಬಲಿಯಾದ ಬೆನ್ನಲ್ಲೇ ಅಲ್ಲಿ ಗಡ್ಡ ಮತ್ತು ಬುರ್ಖಾಧಾರಿಗಳಿಗೆ ನಿಷೇಧ ಹೇರಿದೆ. ಇದೇ ಪ್ರಾಂತ್ಯದ ಇನ್ನೊಂದು ನಗರದ ಕರಾರ್ಮೆ ಎಂಬಲ್ಲಿಯೂ ಗಡ್ಡದಾರಿಗಳು ಹಾಗೂ ಬುರ್ಖಾಧಾರಿಗಳು ಪ್ರಯಾಣಿಸುವುದಕ್ಕೆ ನಿಷೇಧ ಹೇರಲಾಗಿದ್ದು ಇದು ಮುಂದಿನ ಸೋಮವಾರದಿಂದಲೇ ಜಾರಿಗೆ ಬರಲಿದೆ.
ಅದರಂತೆ ಮುಂದಿನ ಸೋಮವಾರದ ನಂತರ ಬುರ್ಖಾ, ಮುಖಪರದೆ, ಶಿರವಸ್ತ್ರ, ಚಂದ್ರ ಮತ್ತು ನಕ್ಷತ್ರವನ್ನು ಚಿತ್ರಿಸಿರುವ ಬಟ್ಟೆಗಳು ಮತ್ತು ಉದ್ದನೆಯ ಗಡ್ಡವನ್ನು ಧರಿಸಿ ಪ್ರಯಾಣಿಸುವುದು ಅಪರಾಧವಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆ.20ರಿಂದ ನಗರದಲ್ಲಿ ನಡೆಯಲಿರುವ ಸ್ಥಳೀಯ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.
ಅಲ್ಲದೆ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿನ ಮುಸ್ಲಿಮರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಅವಕಾಶ ನೀಡುವ ನಿಯಮಾವಳಿಗೆ ತಿದ್ದುಪಡಿ ಮಾಡಲು ಅಲ್ಗಂಲಿನ ಸರಕಾರ ಗಂಭೀರ ಚಿಂತನೆ ನಡೆಸಿದೆ. ಈ ಹಿಂದೆ ಚೀನ ಸರಕಾರ ಮುಸ್ಲಿಂ ಸಮುದಾಯಕ್ಕೆ ಸೇರಿದ ಸರಕಾರಿ ಉದ್ಯೋಗಿಗಳು ರಮ್ಜಾನ್ ಉಪವಾಸ ಆಚರಿಸುವುದನ್ನು ಆರೋಗ್ಯದ ಕಾರಣ ಮುಂದೊಡ್ಡಿ ನಿರ್ಬಂಧಿಸಿತ್ತು. ಉಪವಾಸ ಬಿಡುವ ಸಂದರ್ಭದಲ್ಲಿ ಮಸೀದಿ ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸುವುದರಿಂದ ಉಗ್ರರು ತಮ್ಮ ಬಲವನ್ನು ವಿಸ್ತರಿಸಿಕೊಳ್ಳಲು ಈ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ಪೊಲೀಸರು ನೀಡಿದ ಸಲಹೆಯಂತೆ ಸರಕಾರ ಮುಸ್ಲಿಂ ಸರಕಾರಿ ನೌಕರರ ರಮ್ಜಾನ್ ಉಪವಾಸ ಆಚರಣೆಗೆ ನಿಷೇಧ ಹೇರಿತ್ತು ಎನ್ನಲಾಗಿದೆ

