ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಪುಸ್ತಕ ಬಿಡುಗಡೆಯಾದಾಗಿನಿಂದಲೂ ಕಾಂಗ್ರೆಸ್ ನವರು ತಮ್ಮ ಆಪ್ತ ವಲಯದಲ್ಲಿರುವವರ ಪುಸ್ತಕ ಬಿಡುಗಡೆಯಾಗಲಿದೆ ಎಂದರೇನೆ ಬೆಚ್ಚಿ ಬೀಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿರುವ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರೂ ಒಂದು ಪುಸ್ತಕ ಬರೆದಿದ್ದಾರೆ. ಆಗಸ್ಟ್.7ಕ್ಕೆ ಈ ಪುಸ್ತಕದ ಬಿಡುಗಡೆಗೆ ಮಹೂರ್ತ ನಿಗದಿ ಪಡಿಸಲಾಗಿದೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ನಟವರ್ ಸಿಂಗ್ ಅವರ ಬಿಡುಗಡೆಯಾಗಲಿರುವ ಪುಸ್ತಕದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ನಡುಕ ಉಂಟಾಗಿದೆ.
ಇಂಡಿಯಾ ಟುಡೆ ಅಂತರ್ಜಾಲ ಪತ್ರಿಕೆ ವರದಿ ಪ್ರಕಾರ ನಟವರ್ ಸಿಂಗ್ ಬರೆದಿರುವ ಪುಸ್ತವಕವನ್ನು ನಟವರ್ ಬಾಂಬ್ ಅಥವಾ(N-Bomb) ಎಂದೇ ಕರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ನಟವರ್ ಸಿಂಗ್ ಅವರ ಜೋರ್ ಬಾಗ್ ನಿವಾಸಕ್ಕೆ ತೆರಳಿ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಅಲ್ಲದೆ, ಈ ಪುಸ್ತಕವನ್ನು ಬಿಡುಗಡೆ ಮಾಡದಿರುವಂತೆ ನಟವರ್ ಸಿಂಗ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಬಿಡುಗಡೆಗೆ ಕೇವಲ ಕೆಲವೇ ದಿನಗಳು ಉಳಿದಿರುವ ಈ ಸಂದರ್ಭದಲ್ಲಿ ಗಾಂಧಿ ಕುಟುಂಬದ ಈ ಪ್ರಯತ್ನ ಫಲಿಸುವುದೇ ಎನ್ನುವುದು ಪ್ರಶ್ನೆ.
ಯುಪಿಎ- 1 ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ನಟವರ್ ಸಿಂಗ್ ಅವರು ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಿಲುಕಿ 2005ರಲ್ಲಿ ರಾಜೀನಾಮೆ ನೀಡಿದ್ದರು. ಆ ಬಳಿಕ ಸೋನಿಯಾ ಗಾಂಧಿಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಅಲ್ಲದೇ ಎಂದಿಗೂ ಗಹನವಾದ ಚರ್ಚೆ ನಡೆಸಿರಲಿಲ್ಲ.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಜತೆಗಿನ ತಮ್ಮ ಒಡನಾಟ, ರಾಜೀವ್ ಹತ್ಯೆ ಬಳಿಕ ಕಾಂಗ್ರೆಸ್ಸಿನಲ್ಲಿ ನಡೆದ ಬೆಳವಣಿಗೆಗಳು, ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭಗಳ ಕುರಿತ ಮಾಹಿತಿ ಇರುವ ನಟವರ್ ಸಿಂಗ್ ಅವರ ‘ ಒನ್ ಲೈಫ್ ಈಸ್ ನಾಟ್ ಇನಫ್’ ಎಂಬ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯಾಗುವುದಕ್ಕೆ ಕೆಲವೇ ದಿನಗಳಿರುವುದರಿಂದ ಸೋನಿಯಾ ಗಾಂಧಿ ನಟವರ್ ಸಿಂಗ್ ಅವರೊಂದಿಗೆ ಒಂದು ಗಂಟೆಗಳ ಕಾಲದ ಸುದೀರ್ಘ ಚರ್ಚೆ ನಡೆಸಿ ಪುಸ್ತಕವನ್ನು ಬಿಡುಗಡೆ ಮಾಡದೇ ಇರುವಂತೆ ಮನವಿ ಮಾಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭಗಳ ಕುರಿತು ನಟವರ್ ಸಿಂಗ್ ಅವರು ಪುಸ್ತಕದಲ್ಲಿ ಪ್ರಸ್ತಾಪಿಸಿರುವುದೇ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಪುಸ್ತಕ ಬಿಡುಗಡೆ ಮಾಡದಂತೆ ಒತ್ತಡ ಹೇರಲು ಕಾರಣ ಎಂದು ಹೇಳಲಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಹಾಗೂ ಕೇಂದ್ರ ಕಲ್ಲಿದ್ದಲು ಖಾತೆ ಮಾಜಿ ಕಾರ್ಯದರ್ಶಿ ಪಿ.ಸಿ ಪಾರಖ್ ಬರೆದ ಪುಸ್ತಕಗಳು ಕಾಂಗ್ರೆಸ್ಸಿಗೆ ತೀವ್ರ ಮುಜುಗರ ಉಂಟು ಮಾಡಿದ್ದು ಆಯ್ತು. ಇದೀಗ ನಟವರ್ ಸಿಂಗ್ ಅವರು ಬರೆದ `ಒನ್ ಲೈಫ್ ಈಸ್ ನಾಟ್ ಇನಫ್’ ಎಂಬ ಆತ್ಮಚರಿತ್ರೆ ಪುಸ್ತಕ ಕಾಂಗ್ರೆಸ್ ನ ರಾಜಕೀಯ ಲೈಫಿಗೇ ಕುತ್ತು ತರುವ ಸಾಧ್ಯತೆಗಳಿವೆ. ಸಂಜಯ್ ಬರು ಬರೆದ ಪುಸ್ತಕದಿಂದ 2014ರ ಲೋಕಸಭಾ ಚುನಾವಣೆಯಲ್ಲಿ 128 ವರ್ಷದ ಕಾಂಗ್ರೆಸ್ ಪಕ್ಷವನ್ನು ಸಂಸತ್ ನಲ್ಲಿ 44 ಸ್ಥಾನಗಳಿಗೆ ಇಳಿಕೆಯಾಯಿತು. ಇದೀಗ ಕಟ್ಟಾ ಕಾಂಗ್ರೆಸ್ಸಿಗರಾದ ನಟವರ್ ಸಿಂಗ್ ಬರೆದಿರುವ ಪುಸ್ತಕ ಕಾಂಗ್ರೆಸ್ ಸ್ಥಿತಿಯನ್ನು ಯಾವಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೃಪೆ: ಡೈಲಿ ಮೈಲ್


