ಕೈಕಂಬ:ಗುರುಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ 2017-18ರ ಸಾಲಿನ ಪ್ರಥಮ ಹಂತ ಆರು ತಿಂಗಳಲ್ಲಿ ನಡೆದ ಕಾಮಗಾರಿಗಳ `ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ’ ಅ.30ಬುಧವಾರ ನಡೆಯಿತು. ಸಭೆಯಲ್ಲಿ ಮಂಗಳೂರು ತಾಲೂಕು ತೋಟಗಾರಿಕೆ ಇಲಾಖೆಯ ಸೀಮಾ ನೋಡೆಲ್ ಅಧಿಕಾರಿಯಾಗಿ ಅಧ್ಯಕ್ಷತೆ ವಹಿಸಿದ್ದರು.
ಇತರ ಗ್ರಾಮಗಳು ಮತ್ತು ಗುರುಪುರ ಗ್ರಾಮದ ಜನಸಂಖ್ಯೆಗೆ(10,871) ಹೋಲಿಸಿದರೆ ಗುರುಪುರ ಪಂಚಾಯತಿನಲ್ಲಿ ಎಂಜಿನರೇಗಾ ಉದ್ಯೋಗ ಕಾರ್ಡುಗಳ ಸಂಖ್ಯೆ(841) ತೀರಾ ಕಡಿಮೆ ಇದೆ. ಉದ್ಯೋಗ ಅವಕಾಶವಿದ್ದರೂ ಕೆಲಸ ನಡೆದಿಲ್ಲ. ಮುಂದಿನ ಅವಧಿಯಲ್ಲಿ ಗ್ರಾಮವಾಸಿಗಳು ಉದ್ಯೋಗ, ಹೆಚ್ಚೆಚ್ಚು ಕಾರ್ಡು ಪಡೆದು ವೈಯಕ್ತಿಕ ಅಥವಾ ಸಾರ್ವಜನಿಕವಾಗಿ ಗ್ರಾಮದ ಅಭಿವೃದ್ಧಿಯಲ್ಲಿ ಸಹಭಾಗಿಗಳಾಗಬೇಕು ಎಂದು ನೋಡೆಲ್ ಅಧಿಕಾರಿ ಸೀಮಾ ಮನವಿ ಮಾಡಿಕೊಂಡರು.

ಪ್ರಸಕ್ತ ಅವಧಿಯಲ್ಲಿ ಗ್ರಾಮದಲ್ಲಿ ಎಂಜಿ ನರೇಗಾ ಕಾರ್ಡುದಾರ ಸಂಖ್ಯೆ ಹೆಚ್ಚುತ್ತಿದೆ ಎಂದ ಗುರುಪುರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್, ನರೇಗಾ ಉದ್ಯೋಗ ಕಾರ್ಡುಗಳ ಊರ್ಜಿತಾವಧಿ(5 ವರ್ಷ), ಬಳಕೆ, ನವೀಕರಣ ಹಾಗೂ ಇರುವ ಉದ್ಯೋಗಾವಕಾಶಗಳ ಬಗ್ಗೆ ಸವಿವರ ನೀಡಿದರು.
ಆರು ತಿಂಗಳಲ್ಲಿ ಗ್ರಾಮದಲ್ಲಿ ನಡೆದ ಮನೆ ನಿರ್ಮಾಣ, ಬಾವಿ ರಚನೆ, ಎರೆಹುಳ ಗುಂಡಿ ರಚನೆ ಸಹಿತ 40 ಕಾಮಗಾರಿಗಳ ಕುರಿತು ತಾಲೂಕು ಸಂಯೋಜನಾಧಿಕಾರಿ ಪವಿತ್ರಾ ಶೆಟ್ಟಿ ಸಭೆಯಲ್ಲಿ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಕೆಲವರು ನರೇಗಾದ ಕೂಲಿ ಹಣ ಬಿಡುಗಡೆ ವಿಷಯದಲ್ಲಿ ತಮಗಿದ್ದ ಅನುಮಾನಗಳ ಬಗ್ಗೆ ಪ್ರಶ್ನಿಸಿ, ಅಧಿಕಾರಿಗಳಿಂದ ಪರಿಹಾರ ಕಂಡುಕೊಂಡರು.

ಜಾಬ್ ಕಾರ್ಡಿನ ವ್ಯಾಪ್ತಿಯಲ್ಲಿ ಬರುವ ಮಳೆನೀರು ಕೊಯ್ಲು, ಕಟ್ಟ ನೀರಾವರಿ, ದನದ ಹಟ್ಟಿ, ಇಂಗು ಗುಂಡಿ ಮೊದಲಾದ ಹೊಸ ಕಾಮಗಾರಿಗಳ ಬಗ್ಗೆ ತಾಲೂಕಿನ ಕಿರಿಯ ಇಂಜಿನಿಯರ್ ಪ್ರದೀಪ್ ಭಟ್ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗಾ.್ರಪಂ ಅಧ್ಯಕ್ಷೆ ರುಕಿಯಾ, ಕಾರ್ಯದರ್ಶಿ ಕೇಶವ ಮೊದಲಾದವರು ಇದ್ದರು. ಪಂಚಾಯತಿನ ಅರ್ಶಾದ್ ಲೆಕ್ಕಪತ್ರ ವಾಚಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಸುನಿತಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
`ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದಲ್ಲಿ, ನೀವು ಕೊನೆಗೆ ಆಧಾರ್ ನಂಬ್ರ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ನರೇಗಾ ಉದ್ಯೋಗ ಕಾರ್ಡಿನ ಕೂಲಿ ಹಾಗೂ ಸರ್ಕಾರದ ಇತರ ಎಲ್ಲ ಯೋಜನೆಗಳ ಹಣ ಜಮೆಯಾಗುತ್ತದೆ. ಮೊದಲು ಲಿಂಕ್ ನೀಡಿದ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದಿಲ್ಲ. ಅನುಮಾನಗಳಿದ್ದಲ್ಲಿ ನಿಮ್ಮ ಎಲ್ಲ ಖಾತೆಗಳನ್ನೊಮ್ಮೆ ಬ್ಯಾಂಕಿನಲ್ಲಿ ಪರೀಕ್ಷಿಸಿಕೊಳ್ಳಿ” ಎಂದು ಗ್ರಾಮದ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಸಲಹೆ ನೀಡಿದರು.

