ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಮಾಡಿರುವ ಬೆಳೆ ಸಾಲ ಮತ್ತು ಅಲ್ಪಾವಧಿ ಸಾಲವನ್ನು 50ಸಾವಿರ ರೂ.ವರೆಗೆ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಇಂದು ಘೋಷಿಸಿದ್ದಾರೆ.2017 -18ನೇ ಸಾಲಿನ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ರೈತರ ಹಾಗೂ ಕೃಷಿಕರ ಹಿತದೃಷ್ಟಿಯಿಂದ ನಿನ್ನೆಯವರೆಗೆ ಬಾಕಿ ಇರುವ ಎಲ್ಲ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.
2016ರ ಮಾರ್ಚ್ ಅಂತ್ಯದವರೆಗೆ ಬಾಕಿ ಇರುವ 36 ಸಾವಿರ ಕೋಟಿ ರೂ. ಸಣ್ಣ ಮತ್ತು ಅತಿಸಣ್ಣ ರೈತರ ಸಾಲ ಮನ್ನಾ ಮಾಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಣೆ ಮಾಡಿದ್ದಾರೆ. ಆದರೆ, ಆದೇಶ ಹೊರಬಂದಿಲ್ಲ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಿವೀಸ್ ಸಾಲ ಮನ್ನಾ ಮಾಡುವ ಘೋಷಣೆ ಮಾಡಿ ಅದಕ್ಕೊಂದು ಸಮಿತಿ ರಚಿಸಿದ್ದಾರೆ. ಆದೇಶ ಮಾತ್ರ ಎರಡೂ ರಾಜ್ಯಗಳಿಂದ ಹೊರ ಬಿದ್ದಿಲ್ಲ. ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ 10 ಲಕ್ಷ ರೈತರಿಗೆ ಸಹಾಯವಾಗುವಂತೆ ಸಾಲ ಮನ್ನಾ ಮಾಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ಹೇಳಿದರು.
ಸಿಎಂಗೆ ಅಭಿನಂದನೆ :
ಸಾಲ ಮನ್ನಾ ಘೋಷಣೆ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಸಾಲ ಮನ್ನಾ ಘೋಷಣೆಯಾದ ಬಳಿಕ ಪ್ರಸಕ್ತ ಸಾಲಿನ ಆಯವ್ಯಯಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆಯಿತು. ಸಚಿವರು ಹಾಗೂ ಎಲ್ಲ ಶಾಸಕರು ಸಿಎಂ ಅವರಿಗೆ ಹಸ್ತ ಲಾಘವ ಮಾಡುವ ಮೂಲಕ ಅಭಿನಂದಿಸಿದರು.

