*ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಹಿರಿಯಡ್ಕ ಉಡುಪಿ ಜಿಲ್ಲೆ*.*ತುಳುನಾಡಿನ ಮಧ್ಯ ಭಾಗದಲ್ಲಿರುವ ಹಿರಿಯಡ್ಕವು ಒಂದು ಅಭೂತಪೂರ್ವವಾದ ದೇವ, ದೈವ ಮತ್ತು ಭೂತಗಳ ಸಂಗಮದ ‘ಆಲಡೆ ಸ್ಥಾನ’. ಧಾರ್ಮಿಕ ಆಚರಣೆಯಲ್ಲಿ ಕಂಡುಬರುವ ಸಿರಿಜಾತ್ರೆಯ ಪ್ರಧಾನ ಕೇಂದ್ರವಾಗಿ ಹಿರಿಯಡ್ಕ ಕಂಡುಬರುತ್ತದೆ. ಅತ್ಯಧಿಕ ಸಂಖ್ಯೆಯಲ್ಲಿ ಜನರು ಊರು, ಪರ ಊರುಗಳಿಂದ ಇಲ್ಲಿಯ ಸಿರಿ ಉತ್ಸವಕ್ಕೆ ಆಗಮಿಸುತ್ತಾರೆ. ಉಡುಪಿ ಜಿಲ್ಲೆಯಿಂದಷ್ಟೇ ಅಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
*ದೇಗುಲದ ಐತಿಹ್ಯ*
ಮಹಾಶಿವನ ಭಕ್ತನಾದ ‘ಅಡಕತ್ತಾಯ’ ಎಂಬ ಬ್ರಾಹ್ಮಣನು ಘೊರ ತಪಸ್ಸನ್ನು ಆಚರಿಸಿದ. ಆತನ ಭಕ್ತಿಗೆ ಶಿವ ಮೆಚ್ಚುತ್ತಾನೆ. ‘ತಾನು ತಪಸ್ಸು ಮಾಡಿದ ಸ್ಥಳದಲ್ಲಿ ಶಿವ ನೆಲೆಸಬೇಕು’ ಎಂದು ಅಡಕತ್ತಾಯ ಬೇಡಿಕೊಂಡ. ಶಿವನು ಅದಕ್ಕೆ ಸಮ್ಮತಿಸಿದ, ಆದರೆ “ತನ್ನ ಗಣಗಳೊಂದಿಗೆ ಅಡಕತ್ತಾಯನೂ ಸೇರಿ, ನನ್ನೊಂದಿಗೆ ಇಲ್ಲಿಯೇ ನೆಲೆಸಬೇಕು” ಎಂಬ ಷರತ್ತನ್ನು ಹಾಕಿದ. ಅದಕ್ಕೆ ಅಡಕತ್ತಾಯನು ಒಪ್ಪಿದ. ಅದರಂತೆ ಶಿವನು ತನ್ನ ಅಸಂಖ್ಯ ಗಣಗಳೊಂದಿಗೆ ಅಡಕತ್ತಾಯನನ್ನು ಸೇರಿಸಿ ಇಲ್ಲಿ ನೆಲೆಸಿದ. ಅಡಕತ್ತಾಯನಿಗೆ ೬೪ ಕಡೆಗಳಲ್ಲಿರುವ ಸ್ಥಾನಗಳಲ್ಲಿ ಈ ಸ್ಥಾನವೇ ಹಿರಿದಾಗಿದೆ. ಇದರಿಂದ ಈ ಊರಿಗೆ ‘ಹಿರಿಯಡ್ಕ’ ಎಂಬ ಹೆಸರು ಬರಲು ಕಾರಣವಾಯಿತು ಎನ್ನಲಾಗಿದೆ.ದೇಗುಲದ ವಿನ್ಯಾಸ:
ಹಿರಿಯಡ್ಕ ದೇವಸ್ಥಾನವು ವಿಜಯನಗರ ಕಾಲಕ್ಕೆ ಸೇರಿದ್ದು, ಹಿಂದೆ ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತು ಎಂದು ತಿಳಿದು ಬಂದಿದೆ. ಅಡಕತ್ತಾಯನ ನೆನಪನ್ನು ಸದಾ ಹಸಿರಾಗಿಸುವಂತಹ ಭವ್ಯ ಸ್ಮಾರಕ ಇಲ್ಲಿ ನಿರ್ಮಾಣಗೊಂಡಿದ್ದು, ಕಾಷ್ಠಶಿಲ್ಪದ ರಚನೆಗೆ ಕರಾವಳಿಯು ಅರ್ಪಿಸಿರುವ ಒಂದು ಅಮೋಘ ಕೊಡುಗೆ ಇದಾಗಿದೆ.ಈ ದೇವಳವು ಎರಡು ಪ್ರಾಕಾರಗಳನ್ನು ಹೊಂದಿದೆ. ಹೊರ ಪ್ರಾಕಾರವು ವಿಶಾಲವಾಗಿದ್ದು, ಪೂರ್ವ ಭಾಗದಲ್ಲಿ ಬೃಹತ್ ಮಹಾದ್ವಾರವಿದೆ. ಅಂಗಣದಲ್ಲಿ ಬೃಹತ್ ಧ್ವಜಸ್ತಂಭ ಮತ್ತು ಪ್ರಧಾನ ಬಲಿಪೀಠವಿದೆ. ವಾಯುವ್ಯದಲ್ಲಿ ಪಿಲಿಚಾಮುಂಡಿಯ ಸ್ಥಾನವಿದೆ.
ಉತ್ತರ ಭಾಗದಲ್ಲಿ ಅಸಂಖ್ಯ ದೈವಗಣಗಳು ಅವುಗಳ ಮಧ್ಯದಲ್ಲಿ ಅಡಕತ್ತಾಯನಿಗೆ ಕಾಷ್ಠ ಮಂಟಪವಿದೆ. ಒಳ ಪ್ರಾಕಾರದಲ್ಲಿ ಆಧುನಿಕ ಮಂಟಪವಿದೆ. ಇದರ ಎದುರುಗಡೆ ಒಂದು ವಿಶಾಲವಾದ ಮಾಳಿಗೆ ಸಹಿತವಾಗಿರುವ ಮಂಟಪವಿದ್ದು, ಇದು ಮರದ ರಚನೆಯಿಂದಾದ ತಾಮ್ರದ ಹೊದಿಕೆಯನ್ನು ಹೊಂದಿದೆ. ಈ ಮಂಟಪವನ್ನು ‘ಪ್ರಮಾಣಚಾವಡಿ’ ಎಂದು ಕರೆಯುತ್ತಾರೆ. ವಾದ-ವಿವಾದಗಳ ಪರಿಹಾರಾರ್ಥ ಇಲ್ಲಿ ಪ್ರಮಾಣ ಮಾಡುತ್ತಾರೆ. ಈ ಮಂಟಪದ ಮೇಲ್ಭಾಗದಲ್ಲಿ ಚತುರ್ಮುಖ ಬ್ರಹ್ಮನ ಕಾಷ್ಠಶಿಲ್ಪದ ಮುಚ್ಚಿಗೆ ಇದೆ.ಗರ್ಭಗೃಹದಲ್ಲಿ ಎರಡು ಹಂತದ ಕಲ್ಲಿನ ಪೀಠವಿದೆ. ಇದರ ಮೇಲೆ ದೇವ-ದೈವಗಳ ಸಮೂಹವೇ ಅಡಕವಾಗಿದ್ದು, ಇವುಗಳ ಒಟ್ಟು ಸಂಖ್ಯೆ ೧೯. ಇಲ್ಲಿನ ಮುಖ್ಯ ಗಣ ವೀರಭದ್ರ. ವೀರಭದ್ರನ ಚತುರ್ಮುಖ ಲೋಹದ ವಿಗ್ರಹ ಇಲ್ಲಿದೆ. ವೀರಭದ್ರನ ಎಡಬಲಗಳಲ್ಲಿ ಸಿರಿದೈವಗಳಾದ ಅಬ್ಬಗ-ದಾರಗರು ನೆಲೆಸಿದ್ದಾರೆ.ಐತಿಹಾಸಿಕ ಸಿರಿಜಾತ್ರೆ:ಕರಾವಳಿ ಕರ್ನಾಟಕದ ಜಾನಪದೀಯ, ಧಾರ್ಮಿಕ ಆಚರಣೆಯಾದ ಸಿರಿಜಾತ್ರೆಯು ನಂದಳಿಕೆ ಮತ್ತು ಹಿರಿಯಡ್ಕ ಜಾತ್ರೆಯಲ್ಲಿ ಮಾತ್ರ ಕಂಡುಬರುತ್ತದೆ.
ಹಿರಿಯಡ್ಕ ದೇವಸ್ಥಾನದಲ್ಲಿ ಮೇಷ ಹುಣ್ಣಿಮೆಯಂದು (ಈ ವರ್ಷ ಮೇ ೧೦) ಸಿರಿಜಾತ್ರೆಯು ನಡೆಯುತ್ತದೆ. ಆವೇಶಭರಿತ ಭಕ್ತೆಯರು ಸಿರಿಯ ಸಂಮೋಹನಕ್ಕೆ ಒಳಗಾಗುತ್ತಾರೆ. ಹಿರಿಯಡ್ಕದ ಐಸಿರಿಯ ಸಿರಿಜಾತ್ರೆಯು ತನ್ನ ಸಿರಿತನದಿಂದ ಮೆರೆದಿದೆ.ರಥೋತ್ಸವ:ಪ್ರತೀ ವರ್ಷ ಮೇಷ ಮಾಸದ ಹುಣ್ಣುಮೆಯಂದು ಸಿರಿಜಾತ್ರೆ ಮತ್ತು ಮೂರನೇ ದಿನ ಶ್ರೀಮನ್ಮಹಾರಥೋತ್ಸವ ನಡೆಯುತ್ತದೆ. ಮಹಾನ್ ಉತ್ಸವದಲ್ಲಿ ಎಳೆಯುವ ರಥವು ಬ್ರಹ್ಮರಥವಾಗಿದ್ದು,”ದಕ್ಷಿಣ ಕರ್ನಾಟಕದ ಎರಡನೇ ಅತೀ ಎತ್ತರದ ರಥ” ಎಂಬ ಖ್ಯಾತಿಯನ್ನು ಹೊಂದಿದೆ. ರಥವು ಕಲಾತ್ಮಕ ಕೆತ್ತನೆಗಳಿಂದ ಕೂಡಿದ್ದು, ೪ ಬೃಹತ್ ಚಕ್ರ ಸೇರಿದಂತೆ ಒಟ್ಟು ೬ಚಕ್ರಗಳಿವೆ. ಈ ಐತಿಹಾಸಿಕ ರಥವನ್ನು ಎಳೆಯಲು ತಲೆತಲಾಂತರದಿಂದ ಬಂದ ಕುಟುಂಬಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ.ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುವ ಈದೇವಸ್ಥಾನವು ಈಗ ಸುಮಾರು ೧೨ ಕೋಟಿ ರೂ.ವೆಚ್ಚದಲ್ಲಿ ೨ ಹಂತದಲ್ಲಿ ಸಮಗ್ರ ಜೀರ್ಣೋದ್ಧಾರ ನಡೆಯುತ್ತಿದೆ. ಮೇ ೧೦ರ ಐತಿಹಾಸಿಕ ಸಿರಿಜಾತ್ರೆ ಮತ್ತು ೧೩ರಂದು ನಡೆಯುವ ವೈಭವೋಪೇತ ರಥೋತ್ಸವಕ್ಕೆ ನಾವೆಲ್ಲರೂ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗೋಣ.
