ವರ್ತಮಾನದಲ್ಲಿ ಕಂಡುಕೊಂಡ ಪತ್ರಿಕಾರಂಗದ ಒಂದು ವಿದ್ಯಮಾನ
ಧನಂಜಯ ಗುರುಪುರ
ಜರ್ಮನ್, ಅಮೆರಿಕ, ಇಂಗ್ಲೆಂಡ್‌ನಂತಹ ರಾಷ್ಟ್ರಗಳ ಮೂಲಕ ಹಂತಹಂತವಾಗಿ ನಿಧಾನಗತಿಯಲ್ಲಿ ಒಂದೊಂದೇ ರಾಷ್ಟ್ರಗಳತ್ತ ಹೆಜ್ಜೆ ಹಾಕಿರುವ ಪತ್ರಿಕೆ ಮತ್ತು ಪತ್ರಿಕೋದ್ಯಮ ಇಂದು ವಿಶ್ವವ್ಯಾಪಿಯಾಗಿದೆ. ಈ ಕಾರಣದಿಂದಲೇ ಪತ್ರಿಕಾರಂಗದ ಇತಿಹಾಸ ನಮ್ಮನ್ನು ಕೆಲವು ಶತಮಾನಗಳ ಹಿಂದೆ ಕರೆದೊಯ್ಯತ್ತದೆ.
ಭಾರತದಲ್ಲಿ ೧೮ ಮತ್ತು ೧೯ನೇ ಶತಮಾನದಲ್ಲಿ ತೆವಳುತ್ತ ಸಾಗಿದ ಪ್ರತಿಕೋದ್ಯಮ ಇಂದು ಬಹಳಷ್ಟು ಆವಿಷ್ಕಾರಗಳೊಂದಿಗೆ ಹೆಮ್ಮರವಾಗಿದೆ ಮತ್ತು ಸಾವಿರಾರು ಮಂದಿಗೆ ಉದ್ಯೋಗದಾತ ಕ್ಷೇತ್ರವಾಗಿದೆ.
ವರ್ಷಗಳ ಹಿಂದೆ,(ಅಂದರೆ ನಾನು ಕಂಡಂತೆ) ಸುಮಾರು ೩೫ ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮ ಈಗಿನಷ್ಟು ಬೆಳೆದಿರಲಿಲ್ಲ. ಸುದ್ದಿಮನೆಯಲ್ಲಿ ಅದೇ ಪಿಟಿಐ, ಯುಎನ್‌ಐ ಸುದ್ದಿಗಳು. ತರ್ಜುಮೆಗೆ ನಾಲ್ಕೈದು ಮಂದಿ. ಸುದ್ದಿಮನೆಯ ಪಕ್ಕದಲ್ಲೇ ಡಾರ್ಕ್ರೂಂ. ಕತ್ತಲಾಗುತ್ತಲೇ ಅಲ್ಲಿಬ್ಬರು ಕತ್ತರಿ ಹಿಡಿದು ನಿಲ್ಲುವವರು ! ಅಂದರೆ, ಅದು ಪತ್ರಿಕೋದ್ಯಮದಲ್ಲಿ ‘ಕಟ್ & ಪೇಸ್ಟ್’ ಕಾಲ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿತ ಸುದ್ದಿಗಳು ಕಂಪ್ಯೂಟರ್ ಪ್ರಿಂಟರ್ ಮೂಲಕ ಬಟರ್‌ಶೀಟ್‌ನಲ್ಲಿ ಹೊರಬರುತ್ತಿತ್ತು. ಬಳಿಕ ಅವು ಪ್ಲಾಸ್ಟಿಕ್ ಹಾಳೆಗೆ ಕಟ್ & ಪೇಸ್ಟ್ ಆಗಿ ಅಂಟಿಕೊಳ್ಳುತ್ತವೆ. ಆಗ ಡಾರ್ಕ್ರೂಂ ವ್ಯಕ್ತಿ ಚಿತ್ರ ಸಂಗ್ರಹಗಾರನಾಗಿದ್ದು, ಆತನೇ ದಿನದಿನದ ಹಾಗೂ ಹಳೆಯ(ಕಡತದಲ್ಲಿರುವ) ಚಿತ್ರಗಳನ್ನು ಒದಗಿಸುತ್ತಿದ್ದ. ಇದು ಕೆಲವು ತಾಸಿನ ಕೆಲಸ. ಇದಾದ ಬಳಿಕ ಸುದ್ದಿ ಸುತ್ತಿದ ಪ್ಲಾಸ್ಟಿಕ್ ಹಾಳೆ ಮುದ್ರಣಾಲಯಕ್ಕೆ ಹೋಗುತ್ತದೆ. (ನಾನು ಕಂಡಂತೆ)೨೦೦೦ ಇಸವಿಯವರೆಗೂ ಇವೆಲ್ಲವೂ ಆಗ ಮ್ಯಾನುವಲ್ ಆಗಿತ್ತು. ಮುಂದೆ ಎಲ್ಲವೂ ಕಂಪ್ಯೂಟರ್‌ಮಯವಾಗಿವೆ.
ಪತ್ರಿಕಾರಂಗ ಮತ್ತು ಪತ್ರಿಕೋದ್ಯಮ :
ಪತ್ರಿಕೆಗೆ ಸಂಬಂಧಿಸಿದ್ದು ಪತ್ರಿಕಾರಂಗ. ಮುಂದೆ ಪತ್ರಿಕಾರಂಗವೇ ಉದ್ಯಮವಾಗಿ ಪತ್ರಿಕೋದ್ಯಮವಾಯಿತು. ಈ ಹಂತದಲ್ಲಿ ಅರ್ಹರು ಪತ್ರಕರ್ತರಾಗಬಹುದಾದರೆ, ಯಾವುದೇ ಇತರ ಉದ್ಯಮಿ ನೇರವಾಗಿ ಪತ್ರಿಕೋದ್ಯಮಿಯಾಗಿ ಪತ್ರಿಕೆ ಮುನ್ನಡೆಸುವಂತಹವಾಗಿದ್ದಾರೆ. ಈಗಲೂ ನಾವು ಕಾಣುತ್ತಿರುವುದು ಇದೇ ಸ್ಥಿತಿಗತಿ. ಪತ್ರಿಕಾರಂಗ ಮತ್ತು ಪತ್ರಿಕೋದ್ಯಮಗದಲ್ಲಿರುವ ಒಂದು ಸಣ್ಣ ಭಿನ್ನತೆ ಬಗ್ಗೆ ಪತ್ರಕರ್ತನೊಬ್ಬ ಅರಿತುಕೊಂಡಾಗ, ಆತ ಈಗಲೂ ಪತ್ರಿಕಾರಂಗದಲ್ಲಿ ಯೋಗ್ಯ ಪತ್ರಕರ್ತನಾಗುತ್ತಾನೆ.
ಇವೆರಡು ಭಿನ್ನತೆಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ ಮೇಲೂ, ಆಧುನಿಕ ಪತ್ರಿಕಾರಂಗದಲ್ಲಿ ಬಹುತೇಕ ಮಂದಿ ತಾವು ಪತ್ರಿಕೋದ್ಯಮಿಗಳು ಅಥವಾ ಪತ್ರಕರ್ತರೆಂದು ಭಾವಿಸಿದ್ದಾರೆ. ಇರಲಿ, ಅದು ಅವರ ತಪ್ಪಲ್ಲ. ಪತ್ರಿಕಾರಂಗವು ರಾಜಕೀಯ, ಧಾರ್ಮಿಕ, ಜಾತೀಯವಾದಗಳ ಮೇಲೆ ಒಲವು ಹರಿಸಿರುವುದರಿಂದ ಇಂತಹ ಅಪಥ್ಯ ವಿಚಾರಗಳ ಬಗ್ಗೆ ಮಾತನಾಡಬೇಕಾಗುತ್ತದೆ.
ಈಗ ಪ್ರತಿಯೊಬ್ಬರೂ ಪತ್ರಿಕೋದ್ಯಮಿಗಳು ; ಪತ್ರಕರ್ತರಿಲ್ಲ ಎಂಬ ಹಂತಕ್ಕೆ ಪತ್ರಿಕಾರಂಗ ತಲುಪಿದೆ. ಇದು ಬೇಸರ ಸಂಗತಿಯಾಗಿದ್ದರೂ, ಪತ್ರಿಕೋದ್ಯಮಿಗಳ ಪ್ರಸಕ್ತ ಅಗತ್ಯವೂ ಅದೇ ಆಗಿದೆ. ಪತ್ರಕರ್ತರ ಸಿದ್ಧಾಂತಗಳಿಗೆ ಕವಡೆ ಕಿಮ್ಮತ್ತಿಲ್ಲದ ಕಾಲವಿದ್ದು. ಅದೇನೇ ಇದ್ದರೂ ಪತ್ರಿಕೆ ನಡೆಸುತ್ತಿರುವವರ, ಅಂದರೆ ‘ಉದ್ಯಮಿ’ ಪತ್ರಿಕೋದ್ಯಮಿಗಳ ಉದ್ದೇಶ, ಆಶೋತ್ತರಗಳಿಗೆ ಮಾತ್ರ ಸೀಮಿತವಾಗಿದೆ ಪ್ರಸಕ್ತ ಪತ್ರಿಕಾರಂಗ ! ಇದು ನಿಜಕ್ಕೂ ಬೇಸರದ ಸಂಗತಿ.
ಹಿAದೆ ದೇಶ, ವಿದೇಶ, ಸ್ಥಳೀಯ ಸುದ್ದಿಗಳ ಪ್ರಸಾರ ಪತ್ರಿಕೆಗಳ ಧರ್ಮವಾಗಿತ್ತು. ಸುಮಾರು ೫೦ ವರ್ಷಗಳ ಹಿಂದಿನವರೆಗೆ ಈ ಮಾತು ಸತ್ಯವಾಗಿತ್ತು. ಮುಂದುವರಿದ ಕಾಲಘಟ್ಟದಲ್ಲಿ ಜಾತಿ, ಸಂಘಟನೆ, ವ್ಯಕ್ತಿಗೊಂದು ಪತ್ರಿಕೆಗಳು ಹುಟ್ಟಿಕೊಂಡವು. ವ್ಯಕ್ತಿ ರಾಜಕೀಯಕ್ಕೆ ಸೇರಿದ್ದರೆ, ಆತನ ಪತ್ರಿಕೆಯಲ್ಲಿ ಆತನಿರುವ ರಾಜಕೀಯ ಪಕ್ಷದ ಸುದ್ದಿಗಳಿಗೆ ಆದ್ಯತೆ, ವಿರೋಧ ಪಕ್ಷಗಳಿಗೆ ಆತನ ಪತ್ರಿಕೆಯಲ್ಲಿ ಸ್ಥಾನಮಾನವಿಲ್ಲ. ಇದ್ದರೂ ಸಿಂಗಲ್ ಸುದ್ದಿಗಳಲ್ಲಿ. ಸಂಘಟನೆಗಳ ಪತ್ರಿಕೆ, ಜಾತಿಯ ಪತ್ರಿಕೆಗಳಲ್ಲಿ ಅವರದ್ದೇ ಆದ ಆಯ್ಕೆಗಳಿಗೆ ಆದ್ಯತೆ ನೀಡಿ, ಸುದ್ದಿಗಳು ವೈಭವೀಕರಣಗೊಳ್ಳುತ್ತವೆ. ಹಿಂದೆ ಖಂಡಿತವಾಗಿಯೂ ಇಂತಹ ಪತ್ರಿಕೆಗಳು ಇರಲಿಲ್ಲ.
ದೇಶ-ವಿದೇಶವನ್ನೊಳಗೊಂಡಂತೆ ಒಂದು ಅಖಂಡ ಸಮಾಜದಲ್ಲಿ ಪತ್ರಿಕೆಗಳಲ್ಲಿ ಎಲ್ಲ ಸುದ್ದಿಗಳಿಗೂ ಮನ್ನಣೆ ಸಿಗಬೇಕು ಎಂಬುದು ನಿರ್ವಿವಾದ. ಆದರೆ ಈಗಿನ ಪತ್ರಿಕೆಗಳಿಗೆ ದುರ್ಬೀನು ಇಟ್ಟು ನೋಡಿದರೂ ಅಂತಹ ಸುದ್ದಿಗಳು(ಪಕ್ಷಾತೀತ ಅಥವಾ ಜಾತ್ಯತೀತ, ಸಮಗ್ರತೆಯ) ಕಾಣಸಿಗದು. ಅದಕ್ಕೆ ರಾಜಕೀಯ, ಧಾರ್ಮಿಕ, ಸಂಘಟನೆಗಳ ಬಲಾಬಲ ಪ್ರದರ್ಶನ, ಪ್ರತಿಷ್ಠೇಯೇ ಮುಖ್ಯ ಕಾರಣ.
ಪತ್ರಕರ್ತರ ಸ್ಥಿತಿಗತಿ :
ಉದ್ಯೋಗದೊಂದಿಗೆ ಸಾಮಾಜಿಕ ಸುಧಾರಣೆಯ ಧ್ಯೇಯವಿಟ್ಟುಕೊಂಡು ಪತ್ರಿಕಾರಂಗದಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಪತ್ರಕರ್ತನ ಸ್ಥಿತಿಗತಿ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಪತ್ರಿಕಾರಂಗ(ಪತ್ರಕರ್ತ !) ‘ಕಾವಲು ನಾಯಿಯೋ’ ಅಥವಾ ಸಂವಿಧಾನದ ನಾಲ್ಕನೇ ಅಂಗವೋ ಎಂದೆಲ್ಲ ಗೌರವಯುತವಾಗಿ ಬಿಂಬಿಸಲಾಗಿದ್ದ ಪ್ರಥಮದಲ್ಲಿ ಸಂಬಳ ಕಡಿಮೆಯಾಗಿದ್ದರೂ, ಪತ್ರಕರ್ತನಿಗೆ ಗೌರವ ಹೆಚ್ಚಿತ್ತು ಮತ್ತು ಆತನ ವೃತ್ತಿಜೀವನಕ್ಕೆ ಅದು ಅವ್ಯಕ್ತವಾಗಿ ಸಹಾಯ ಮಾಡುತ್ತಿತ್ತು. ಆದರೆ ಈಗ, ಪತ್ರಿಕಾರಂಗ ಪತ್ರಿಕೋದ್ಯಮಾಗಿ ಮಾರ್ಪಟ್ಟಿದ್ದು, ಇಲ್ಲಿ ಪತ್ರಕರ್ತನಿಗೆ ಕೈತುಂಬ ಸಂಬಳ ಬರಬಹುದೇನಿದ್ದರೂ, ಗೌರವ ಗೌಣವಾಗಿದೆ. ಯಾರು ಬೇಕಾದರೂ ಪತ್ರಕರ್ತನಾಗಬಹುದು, ಪತ್ರಿಕೋದ್ಯಮಿಯಾಗಬಹುದು. ಅರ್ಹತೆಗೆ ಬೆಲೆ ಇಲ್ಲ, ಹಣಕಾಸೊಂದೇ ಪತ್ರಿಕೋದ್ಯಮಿಗಳ ಮಾನದಂಡವಾಗಿಬಿಟ್ಟಿದೆ.
ಸುದ್ದಿಯ ಆಳವಿಲ್ಲ :
ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಪತ್ರಿಕಾರಂಗವು ಸುದ್ದಿಯ ಆಳಕ್ಕೆ ಮಹತ್ವ ನೀಡುತ್ತಿಲ್ಲ. ಬೇಕಾಬಿಟ್ಟಿ ಸುದ್ದಿಗಳು, ಪ್ರಚೋದನಕಾರಿ ಸುದ್ದಿಗಳು ಹೆಚ್ಚು ಸುದ್ದಿ ಮಾಡಿ, ಅರೆಕ್ಷಣದಲ್ಲಿ ಜನರ ಮನಸ್ಸಿಂದ ಮರೆಯಾಗಿ ಬಿಡುತ್ತವೆ. ಮಹತ್ವದ್ದು ಸುದ್ದಿಯಾಗುವ ಕಾಲವೊಂದಿತ್ತು. ಈಗ ಎಲ್ಲವೂ ಸುದ್ದಿ ! ಸುದ್ದಿಯಲ್ಲೂ ಅವಸರ, ಆತುರ. ಕೇಳಿ, ನೋಡಿದ ಸುದ್ದಿ ಪರಾಂಬರಿಸಿ ನೋಡುವಂತಿಲ್ಲ. ಮತ್ತೊಬ್ಬನ ಪತ್ರಿಕೆ, ಸುದ್ದಿವಾಹಿನಿಯಲ್ಲಿ ಪ್ರಕಟವಾಗುವುದಕ್ಕಿಂತ ಮುಂಚಿತವಾಗಿ ತಾನು ಪ್ರಸಾರಿಸಬೇಕೆಂಬ ಆತುರ, ಪತ್ರಿಕೋದ್ಯಮಿಯಿಂದ ಪ್ರಚೋದಿತನಾಗಿರುವ ಪತ್ರಕರ್ತರಲ್ಲಿ ಇರುತ್ತದೆ. ಹಾಗಾಗಿ ಇಂದು ತಪ್ಪು ಸುದ್ದಿಗಳೂ ದೊಡ್ಡ ಸುದ್ದಿಗಳಾಗಿ, ತಕ್ಷಣವೇ ಆ ಸುದ್ದಿ ಬದಲಾಗುತ್ತದೆ. ಅಂದರೆ ಸುದ್ದಿಯ ಆಳಕ್ಕಿಳಿಯುವ ಮನಸ್ಸು ಪತ್ರಕರ್ತನಿಗೂ ಇಲ್ಲ, ಅಂತಹ ಪತ್ರಕರ್ತನನ್ನು ಇಟ್ಟುಕೊಳ್ಳುವ ವ್ಯವಧಾನ ಪತ್ರಿಕೋದ್ಯಮಿಯಲ್ಲೂ ಇಲ್ಲ.
ಪತ್ರಿಕಾರಂಗದ ಮುಂದಿರುವ ಸವಾಲುಗಳು :
ಪತ್ರಿಕಾರಂಗ, ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಮುಂದಿರುವ ಸವಾಲುಗಳು ಅಷ್ಟು ಗಂಭೀರವೂ ಅಲ್ಲ, ಸುಲಭವಾಗಿ ಬಿಡುವಂತಹದ್ದೂ ಅಲ್ಲ. ಯಾಕೆಂದರೆ ಸವಾಲುಗಳು ‘ಗಂಭೀರವಾಗಿವೆ’ ಎಂದು ಹೇಳಿದರೆ, ಅದು ಸವಾಲುಗಳೊಂದಿಗೆ ಸಾಯುತ್ತದೆಯೋ ಎಂಬ ಭೀತಿ ಕಾಡುವುದು ಸಹಜ. ಯಾಕೆಂದರೆ, ಈ ಕ್ಷೇತ್ರ ಮತ್ತು ವೃತ್ತಿಪರರು ನಿರಂತರ ಸವಾಲು ಎದುರಿಸುತ್ತಲೇ ಬಂದಿದ್ದಾರೆ. ಹಾಗಾಗಿ ಎಲ್ಲರೂ ಹೇಳುವಂತೆ ನಾನು, ಸವಾಲುಗಳು ಗಂಭೀರವಾಗಿವೆ ಎಂದು ಹೇಳಲಿಚ್ಚಿಸುವುದಿಲ್ಲ. ಒಂದೊಮ್ಮೆ ಗಂಭೀರವಾಗಿದ್ದರೂ, ಅವು ಹಿಂದಿನಂತೆ ಮುಂದೆಯೂ ಸಲೀಸಾದ ಅಥವಾ ಆವರ್ತನೆಯ ಪರಿಯಲ್ಲಿ ಇರುತ್ತದೆ. ಈ ಬಗ್ಗೆ ಯಾರಲ್ಲೂ ಸಂದೇಹ ಬೇಡ. ಸವಾಲುಗಳಿಗೆ ಪತ್ರಕರ್ತರು ಮೈಯೊಡ್ಡಿ ನಿಲ್ಲಬೇಕು ಎಂದು ಇತ್ತೀಚೆಗೆ ಯಾರೋ ಹೇಳಿದ ನೆನಪು. ಹಾಗೇನಿಲ್ಲ ಬಿಡಿ. ಆಧುನಿಕ ಯುಗ ಅಥವಾ ತಂತ್ರಜ್ಞಾನದ ವೇಗದಲ್ಲಿ ಇವೆಲ್ಲ ಎಲ್ಲ ಕ್ಷೇತ್ರಗಳಂತೆ ಪತ್ರಿಕಾರಂಗದಲ್ಲೂ ಸಹಜ. ಈ ರಂಗದಲ್ಲಿ ಪತ್ರಿಕೋದ್ಯಮಿಗಳಿಗೆ ಮಾತ್ರ ಸರ್ಕಾರದ ಪ್ರೋತ್ಸಾಹ ಇದೆ. ಒಬ್ಬ ಪತ್ರಕರ್ತನಿಗೆ ಸರ್ಕಾರದ ಬೆನಿಫಿಟ್ ಏನೇನೂ ಸಾಲದು. ಇದನ್ನು ನಿವಾರಿಸಿಕೊಳ್ಳುವಲ್ಲಿ ನಮ್ಮೆಲ್ಲರ ಸಾರ್ವತ್ರಿಕ ಪ್ರಯತ್ನವಿರಬೇಕು ಎಂಬುದೇ ಈ ಕ್ಷೇತ್ರದ ದೊಡ್ಡ ಸವಾಲಾಗಿದೆ.
ಬದಲಾವಣೆಯೊಂದಿಗೆ ಕಣ್ಮರೆಯಾಗುವ ಭೀತಿ!
ಎಲ್ಲರೂ ಹೇಳುತ್ತಾರೆ, ಪತ್ರಿಕರಾಂಗ ಬದಲಾಗಿದೆ ಮತ್ತು ಬದಲಾಗುತ್ತದೆ ಎಂದು. ಇದು ಉತ್ತಮ ಬೆಳವಣಿಗೆಯಾಗಿದ್ದರೂ, ಕಂಪ್ಯೂಟರ್ ಯುಗ ಮತ್ತು ಸಾಮಾಜಿಕ ಜಾಲತಾಣ, ತಂತ್ರಜ್ಞಾನದ ಪ್ರಗತಿ, ಡಿಜಿಟಲ್ ಯುಗದ ಭರಾಟೆಯಲ್ಲಿ ಪತ್ರಿಕೆಗಳು ಸೊರಗಿ ಹೋಗುತ್ತಿವೆ ಇಲ್ಲವೇ, ಒಂದೊಂದಾಗಿ ಅಳಿಯುವ ಭೀತಿ ಎದುರಿಸುತ್ತಿವೆ. ಈಗಾಗಲೇ ಇಂತಹ ಸನ್ನಿವೇಶ ಸೃಷ್ಟಿಯಾಗಿದೆ. ಪತ್ರಿಕೆಗಳಿಗಿಂತಲೂ ಪ್ರಥಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆ. ಹಿಂದೆ ಇಂದಿನ ಸುದ್ದಿಗೆ ಮರುದಿನದವರೆಗೆ ಕಾಯಬೇಕಿತ್ತು. ಈಗ ನಡೆದ ಸುದ್ದಿ, ಈ ಕ್ಷಣದಲ್ಲೇ ನಿಮ್ಮ ಮೊಬೈಲ್ ಸ್ಕೀನ್‌ನಲ್ಲಿ ಹರಿದಾಡುತ್ತಿರುತ್ತದೆ. ಹಾಗಾಗಿ ಈಗಲೂ ಜನರು ಸುದ್ದಿಗಾಗಿ ಪತ್ರಿಕೆಯನ್ನೇ ಕಾಯುತ್ತಾರೆ ಎಂದರೆ ಅದು ಪತ್ರಿಕೋದ್ಯಮಿಗಳ ಹುಚ್ಚುತನವಾದೀತು. ಯೂಟ್ಯೂಬ್, ಇನ್‌ಸ್ಟ್ರಾಗ್ರಾಂ, ಫೇಸ್ಬುಕ್ ಹೀಗೆ ಇನ್ನೂ ಹಲವು ಜಾಲತಾಣಗಳು ನಿಮ್ಮ ಸುದ್ದಿಗೆ ಬಾಯ್ದೆರೆದಿರುತ್ತವೆ. ಡಿಜಿಟಲ್ ಯುಗ ಈ ರೀತಿ ಯದ್ವಾತದ್ವ ಬೆಳೆದಿರುವುದರಿಂದ ಈಗ ಪತ್ರಿಕಾರಂಗದ ಬುಡಕ್ಕೆ ನೀರು ಬಂದಿದೆ ಎಂದು ತುಸು ಬೇಸರದಿಂದಲೇ ಹೇಳಬೇಕಾಗುತ್ತದೆ. ಏನೇ ಇದ್ದರೂ ಪತ್ರಿಕೆಗಳು ಇನ್ನಷ್ಟು ವರ್ಷ ಜನಮಾನಸದಲ್ಲಿ ಇರುತ್ತವೆ ಎಂಬ ಆಶಾವಾದ ಇಟ್ಟುಕೊಂಡಿರುವ ಪತ್ರಕರ್ತರ ಸಾಲಿನಲ್ಲಿ ನಾನಿರುವೆ.