Published On: Sat, Jun 19th, 2021

ಉಳಿಸೀ, ಉಳಿಸೀ ಊಳಿಡುವ ಮೊದಲು..

ಉತ್ತಮ ಟೀಂ ವರ್ಕ್ ನಿಂದ ಅದ್ಭುತ ಪ್ರೊಡಕ್ಷನ್ ವೊಂದು ಹೊರಬರುತ್ತದೆ ಎಂಬುದಕ್ಕೆ 80ರ ದಶಕದಲ್ಲಿ ದೂರದರ್ಶನ ಪ್ರಚುರಪಡಿಸಿದ ರಾಮಾಯಣ, ಮಹಾಭಾರತದಂತಹ ಮೇಗಾ ಧಾರವಾಹಿಯೇ ಪರ್ಫೆಕ್ಟ್ ಉದಾಹರಣೆ.

ಇಂದಿಗೂ ಕೃಷ್ಣಾ ಅಂದರೆ…
ನಮ್ಮ ಕಣ್ಮುಂದೆ ಹಾದು ಹೋಗುವುದು ಅದೇ Nitish Bhardwaj ಮುಖ. ಸೀತೆ ಅಂದರೆ Deepika Chikliya. ಅಷ್ಟರ ಮಟ್ಟಿಗೆ ಅದರ ಬೇರು ಗಟ್ಟಿಯಾಗಿ ಬೇರೂರಿದೆ.a9379f24-5171-46f6-b51d-b8f7980f053d

ಉತ್ತರ ಭಾರತದ ಕೆಲವು ಕಡೆ ಧಾರವಾಹಿ ಆರಂಭಕ್ಕೆ ಮುನ್ನ ಟಿವಿ ಮುಂದೆ ದೀಪ ಹಚ್ಚಿ, ಊದಿನ ಕಡ್ಡಿ ಹಚ್ಚಿ ಭಕ್ತಿಯಿಂದ ನೋಡುತ್ತಿದ್ದರು. ಆರಂಭದಲ್ಲಿ ಅದೆಲ್ಲ ಪ್ರಚಾರದ ಗಿಮಿಕ್ ಎಂದೇ ಸುದ್ದಿಯೂ ಆಯಿತು. ಆದರೆ ಅದು ಬರ ಬರುತ್ತಾ ಪಡೆದ ಮೈಲೇಜ್ ಇದೆಯಲ್ಲ, ಅದು ಅದ್ಭುತ!0b5035f8-ea81-4ff0-b6e5-dcf23f6fdf5d

ಇಂತಹ ಸಾಹಸಗಳ ಹಿಂದೆ ಒಂದು ಟೀಂ ಇರಲೇ ಬೇಕು. ಇದ್ದೇ ಇರುತ್ತೆ. ಮಹಾಭಾರತದ ಬಗ್ಗೆ ಹೇಳುವುದಾದರೆ, ಬಿಆರ್ ಚೋಪ್ರಾ ಅವರ ನಿರ್ದೇಶನ, ಅದರ ಹಿಂದಿರುವ ತಂತ್ರಗಾರಿಕೆ, ವೇಷ-ಭೂಷಣ, ಸಂಗೀತ, ಸಾಹಿತ್ಯ, ಅಧ್ಯಯನ ಎಲ್ಲವೂ ಪರ್ಫೆಕ್ಟ್.93c5da3e-a79b-405b-8c3b-88967f570a29

ಕಪ್ಪು ಪರದೆ ಹಿಂದೆ ತೂತು ಮಾಡಿ ಎಲ್ಲಾ ಭಾಷೆಯ ಅಕ್ಷರಗಳನ್ನು ಜೋಡಿಸಿ, ಹಿಂದ್ಗಡೆಯಿಂದ ಲೈಟ್ ಬಿಟ್ಟು, ಸೈನಿಕರು ಹೋರಾಡುವ ಚಂದ ಇದೆಯಲ್ಲಾ ಅದು ಈಗೀನ ಗ್ರಾಫಿಕ್ಸ್ ಗಳೂ ತಲೆ ತಗ್ಗಿಸುವಂತಿದೆ.

ನಾವುಗಳು ಪರದೆ ಮುಂದೆ ನೋಡುತ್ತೇವೆ. ಹಾಗಂತ ಕುತೂಹಲಕ್ಕಾದರೂ ಅದರ ಹಿಂದಿರುವ ಶಕ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವರು ದುಡಿದರೆ ಮಾತ್ರ ಇವರು ಸೆಲೆಬ್ರಿಟಿಗಳು. ಬಣ್ಣ ಇಲ್ಲಾ ಅಂದರೆ ಸುಣ್ಣ ಅಷ್ಟೇ ಉಳಿಯುವುದು. ಅಲ್ಲಿ ದಿನಗೂಲಿ ನೌಕರರ ಬಹಳ ದೊಡ್ಡ ಬಳಗವೇ ಉಂಟು. ಕಾರ್ಪೆಂಟರ್ ನಿಂದ ಹಿಡಿದು ಊಟದ ತಟ್ಟೆ ತೊಳೆಯುವ ವರೆಗೂ. ಅವರವರ ಶಕ್ತಿಗೆ ತಕ್ಕ ಶ್ರಮ.

ಮತ್ತೆ, ಮತ್ತೆ ಕೇಳಬೇಕೆನಿಸುವ ಮಹೇಂದ್ರ ಕಪೂರ್ ಅವರ ಟೈಟಲ್ ಸಾಂಗ್, ಹಾಗೇ, ”ಕಥಾ ಹೇ ಪುರುಷಾರ್ಥ್ ಕೀಯೇ ಸ್ವಾರ್ಥಕೀ ಪರಮಾರ್ಥಿ ಕೀ, ಸಾರಥೀ ಜಿಸ್ ಕೇ ಬನೇ ಶ್ರೀ ಕೃಷ್ಣ್ ಭಾರತ್ ಪಾರ್ಥಕೀ” ಎಂಬ ಸಾಹಿತ್ಯ ರಚನೆ, ಅದಕ್ಕೆ ಅಳವಡಿಸಿರುವ ರಾಜ್ ಕಮಲ್ ಅವರ ಮ್ಯೂಸಿಕ್, ಎಲ್ಲವನ್ನೂ ಸೆರೆ ಹಿಡಿದ ಕ್ಯಾಮೆರಾ ಕೈಚಳಕ, ಮೇಕಪ್ ಎಲ್ಲವೂ ಪಕ್ಕಾ ! ಕೆಲ್ಸಾ ಅಂದರೆ ಹಾಗೇ, ಹಲ್ವಾ ಕಟ್ ಮಾಡಿದ ಹಾಗಿರಬೇಕು. ಹಾಗಾಗಿಯೇ ಇವತ್ತಿಗೂ ಅದರ ಟಿಆರ್ ಪಿ ರಾಕೆಟ್ ತರಹ ಜಿಗಿಯುವುದು.

ಈಗ ನೇರಾ ವಿಷ್ಯಕ್ಕೆ ಬರುವ.
ಯಾವುದೇ ಚಾನಲ್, ಪತ್ರಿಕೆಗಳು ಬದುಕುವುದು ಜಾಹೀರಾತಿನಿಂದಲೇ. ಅದು ಕಾನೂನು ಪ್ರಕಾರ ಸರಿಯಾದ ದಾರಿಯೂ ಹೌದು. ಪತ್ರಿಕೆಗಳಿಗೆ ಪ್ರಸರಣ ಸಂಖ್ಯೆಯಾದರೆ, ಟಿವಿ ಗಳಿಗೆ ಟಿಆರ್ ಪಿ ರೇಟಿಂಗ್. ಅದಕ್ಕಾಗಿ ಏನೆಲ್ಲಾ ಕಸರತ್ತು. ಅಬ್ಬಾ ! ನೋಡಿದ್ರೆ ಭಯ ಆಗುತ್ತೆ. ಕೆಲವು ಚಾನೆಲ್ ಗಳಿಗೆ ಹೊತ್ತು – ಗೊತ್ತು ಇಲ್ಲದ ಸಮಯದಲ್ಲೂ ‘ಗ್ರಹಣ’ ಹಿಡಿಯುತ್ತೆ. ಮತ್ತೆ ಕೆಲವರಿಗೆ ಅವರು ಬದಲಾಗ್ತಾರೆ, ಇವರು ಬರ್ತಾರೆ. ಬರೀ ಸ್ಟೇಟ್ಮೆಂಟ್ ಜರ್ನಲಿಸಂ.

ಮೊನ್ನೆ ಸಿಎಂ ಬದಲಾವಣೆ, ಈಗ ಇಲ್ವಂತೆ, ನಾಳೆ ಉಸ್ತುವಾರಿಯೇ ಚೇಂಜ್ ಅಂತೆ. ಹೀಗೆ ರೆಕ್ಕೆಗೆ ಪುಕ್ಕ ಕಟ್ಟುವ ಬದಲು ನೇರವಾಗಿ ಹೇಳಿ ಬಿಡಿ, ಹೀಗೇ ಅಂತಹ. ಹಾಗೆ ಹೇಳಲು ಎದೆಗಾರಿಕೆ ಬೇಕು. ‘ತನಿಖಾ ವರದಿ’ಯ ಬೆನ್ನು ಹತ್ತುವ ತಾಕತ್ತು ಇರ್ಬೇಕು. ಒಂದಷ್ಟು ಅನುಭವ, ವಾತಾವರಣದಲ್ಲಿ ಆಗುವ ಏರು-ಪೇರಿನ ಸಣ್ಣ ಅರಿವು, ಗ್ರಹಿಸುವ ಸೂಕ್ಷ್ಮ ಬುದ್ಧಿ ಇರಲೇ ಬೇಕು. ಅದೆಲ್ಲಾ ಸತ್ತು ತುಂಬಾ ಕಾಲ ಆಗಿದೆ. ಈಗ ಟೈಮೂ ಇಲ್ಲ. ಏನಿದ್ದರೂ ಫಾಸ್ಟ್ ಫುಡ್. ಬಾಣಲೆ ಸೌಂಡ್ ನೊಂದಿಗೆ ಒಂದಷ್ಟು ಸಾಸ್ ಹಾಕಿ ಕಲಸಿ ಕೊಟ್ಟರೆ ಸಾಕು. ಆಮೇಲೆ ‘ಗಾರ್ನಿಷ್’ ತರಹ ಜೋತಿಷ್ಯ, ಕರೆ ಮಾಡಿ ಅಭಿಪ್ರಾಯ ತಿಳಿಸಿ, ಇಲ್ಲಾಂದ್ರೆ ಕೈಗೆ ಸಿಕ್ಕಿದವರೇ ಪ್ಯಾನೆಲ್ ನಲ್ಲಿ ಲೀಡರ್ ಗಳಾಗಿ. ಅವರದ್ದೊಂದು ಡಿಸ್ಕಸ್ ಬೇರೆ.

ಪಕ್ಷ ಬಿಡಿ, ಸಣ್ಣದೊಂದು ಕಂಪೆನಿ ಸಹ ಈಗ ಒಡೆದೇ ಆಳುವುದು. ಹೀಗಿರುವಾಗ ದೂರದ ದಿಲ್ಲಿಯಲ್ಲಿ ಕುಳಿತ ಪಕ್ಷಗಳು ಸುಮ್ಮನಿರುತ್ತಾ, ಭಾಗ ಆದಷ್ಟೂ ಮೇಲಿದ್ದವರಿಗೇ ಲಾಭ. ಬಂಡಾಯ, ಗುಂಪು ಕಟ್ಟಿದವರು ಕಡೆ ಪೇಚಿಗೆ ಬೀಳುವುದು, ಮತ್ತೆ ಒಂದಾಗುವುದು ಸಹಜ. ಅದನ್ನೇ ಬ್ರೇಕಿಂಗ್, ಬ್ರೇಕಿಂಗ್ ಅಂತ ತೋರಿಸಿ, ವೀಕ್ಷಕರು ರೋಸಿ ಹೋಗುವ ಮಟ್ಟಕ್ಕೆ ಬರುವ ಮೊದಲು ಯಾಕೆ ರೂಟ್ ಚೇಂಜ್ ಮಾಡಬಾರದು. ಸುದ್ದಿಯಲ್ಲೂ ದಾರಿ ಇದೆ. ರೂಟ್ ನಾವು ರೆಡಿ ಮಾಡ್ಬೇಕು. ಆಮೇಲೆ ಬಂಡಿ ಖಂಡಿತ ಓಡುತ್ತೆ.

ಅದಕ್ಕಾಗಿ ಒಂದೊಳ್ಳೆ ಟೀಂ ಬೇಕು. ಬರೀ ತಮ್ಮ ಸುತ್ತ ‘ಸೇಫ್ಟಿ’ ಗ್ರೂಪ್ ಕಟ್ಟಿಕೊಂಡು ನಡೆದರೆ ಯಾವ ಚಾನೆಲ್, ಪತ್ರಿಕೆಗಳೂ ಉಳಿಯುವುದಿಲ್ಲ. ನಮ್ಮನ್ನು ‘ಉಳಿಸೀ, ಉಳೀಸೀ’ ಎಂದು ಊಳಿಡುವ ಬದಲು ‘ನಾವು ಎಲ್ಲಿ, ಯಾಕಾಗಿ, ಹೇಗೆ’ ಎಡವಿದ್ದೇವೆ ಎಂದು ಯೋಚಿಸಿದರೆ ‘ಸರಿಯಾದ ದಾರಿ’ ಅಲ್ಲೇ ಇರುತ್ತದೆ. ಮತ್ತೆ ಗುಣಮಟ್ಟ ಇಲ್ಲಾಂದ್ರೆ ಜನ ಉಪ್ಪಿನಕಾಯಿಯನ್ನೂ ನೆಕ್ಕಲ್ಲ.

ಮಂಗಳೂರಿನಿಂದ ಪ್ರಕಟಗೊಳ್ಳುತ್ತಿದ್ದ ‘ನವಭಾರತ್’ ಪತನಕ್ಕೆ ಮುದ್ರಣ ದೋಷ ಕಾರಣ ಎನ್ನುತ್ತಾರೆ. ‘ಮುಂಗಾರು’ವಿಗೆ ಎಲ್ಲವೂ ಇದ್ದರೂ ಬಂಡವಾಳ ಕೊರತೆಯೇ ಎಲ್ಲವನ್ನೂ ನುಂಗಿ ನೀರು ಕುಡಿಯಿತು. ಕರ್ನಾಟಕದ ಮೊದಲ ಕಲರ್ ಪತ್ರಿಕೆ ‘ಜನವಾಹಿನಿ’ಗೆ ಒಳಜಗಳದ ಕೆಸರು ಮೆತ್ತುಕೊಂಡಿತು. ಎಲ್ಲಾ ಪತನಕ್ಕೂ ಒಂದೊಂದು ವಿಭಿನ್ನ ಕಾರಣ ಅಷ್ಚೇ.

ನಿಜ ಹೇಳ್ಬೇಕಾ, ಎಸಿ ರೂಮಗಳಲ್ಲೂ ಈಗ ಪೂರ್ತಿ ಬೆವರು ಇಳಿಯುತ್ತಿದೆ. ಕಾರಣ, ಬಡಪಾಯಿಗಳ ತಲೆ ಸವರಿ ಸಲೀಸಾಗಿ ಕೆಲಸ ಗಿಟ್ಟಿಸಿಕೊಳ್ಳುವ ಕಾರ್ಪೊರೇಟ್ ಶೈಲಿಯ ‘ಎಂಬಿಎ’ಗಳ ತಲೆಯೂ ಸರಿಯಾಗಿ ಓಡುತ್ತಿಲ್ಲ. ನೆರೆಯ ನೀರು ಅವರ ಕಾಲ ಬುಡದಲ್ಲೇ ಬಂದು ನಿಂತಿದೆ. ಇದೆಲ್ಲಾ ‘ಕರೋನಾ’ ತಂದಿಟ್ಟ ಹೊಸ ಟಾಸ್ಕ್. ಇದರ ಹೊಡೆತಕ್ಕೆ ಸಣ್ಣದೊಂದು ಗೂಡಂಗಡಿಗೂ ಈಗ ಉಳಿವು – ಅಳಿವಿನ ಪ್ರಶ್ನೆ ಎದುರಾಗಿದೆ. ಉಳಿಯಬೇಕಾದದ್ದು ಉಳಿಯತ್ತೆ. ಅಳಿಯಬೇಕಾದದ್ದು….,
ನಾನ್ ಹೇಳಲ್ಲ, ನೀವೇ ಯೋಚಿಸಿ.

ಬರಹ: ತೇಜ್ ಪಾಲ್ ಪೊಳಲಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter