ಮನೋಜ್ ಕನಪಾಡಿಯ ಮನೋಜ್ಞ ಕೈಚಳಕದಲ್ಲಿ ಮೂಡಿಬಂದ ಪೈಬರ್ ಕಲಾಕೃತಿಗಳು
ಬಿ.ಸಿ.ರೋಡ್ : ಹುಲಿ, ದನ ಒಟ್ಟಿಗೆ ಕೂತಿದೆ, ಅಳೆತ್ತರದ ಜಿರಾಫೆ ಯಾವುದೇ ಭಯವಿಲ್ಲದೆ ನಿಂತಿದೆ,ನಾರಾಯಣ ಗುರುಗಳು ಧ್ಯಾನಾಸಕ್ತರಾಗಿದ್ದಾರೆ, ಗಾಂಧೀಜಿ ಮಂದಹಾಸ ಬೀರುತ್ತಾ ಕೂತಿದ್ದಾರೆ. ಇನ್ನೂ ಹಲವು ಜೀವಂತವಿರುವಂತೆ ಕಾಣುವ ಪ್ರಾಣಿ ಪಕ್ಷಿಗಳನ್ನು ಪೈಬರ್‌ನಲ್ಲಿ ಮಾಡಿಸಿ ಅಲಂಕಾರಿಕಾ ವಸ್ತುಗಳನ್ನಾಗಿ ಮಾಡಿರುವ ಕಲಾ ಸಾಧಕ ಕಳ್ಳಿಗೆ ಗ್ರಾಮದ ಕುಕ್ಕೆಶ್ರೀ ಡಿಸೈನ್‌ನ ಮಾಲಕ ಮನೋಜ್ ಕನಪಾಡಿ.
ಮನೋಜ್‌ರವರಲ್ಲಿ ವಿಶೇಷತೆ ಏನೆಂದರೆ ಎಲ್ಲವನ್ನೂ ಒಬ್ಬರೇ ಸ್ವತಃ ನಿರ್ಮಾಣ ಮಾಡುತ್ತಾರೆ. ಮೊದಲು ಕಬ್ಬಿಣದ ಸರಳುಗಳನ್ನು ವೆಲ್ಡಿಂಗ್ ಮಾಡಿ ಪ್ರಾಣಿಯ ರೂಪ ಭರಿಸಿ ನಂತರ ಅದನ್ನು ಆವೆಮಣ್ಣಿನಲ್ಲಿ ರೂಪಾಂತರಿಸಿ, ಬೈ ಹುಲ್ಲಿನಲ್ಲಿ ಸುತ್ತಿ ಪೈಬರ್ ಕೆಮಿಕಲ್ ಹಾಕಿ ನಂತರ ಅದರೊಳಗಿರುವ ಆವೆ ಮಣ್ಣನ್ನು ತೆಗೆದು ನಂತರ ಅದಕ್ಕೆ ಬಣ್ಣಗಾರಿಕೆ ಮಾಡಿ ನೈಜ ಪ್ರಾಣಿಗಳಂತೆ ನಿರ್ಮಾಣ ಮಾಡುತ್ತಾರೆ.
ಪ್ರತಿಭೆ ಅನಾವರಣಗೊಳಿಸಲು ಕೆಲವರು ಅವಕಾಶಕ್ಕಾಗಿ ಕಾಯುತ್ತಾರೆ, ಇನ್ನು ಕೆಲವರು ತಾವೇ ಅವಕಾಶವನ್ನು ಸೃಷ್ಟಿಸುತ್ತಾರೆ. ತನ್ನ ಅದಮ್ಯ ಆಸಕ್ತಿ, ಪ್ರಾಮಾಣಿಕ ಪರಿಶ್ರಮ, ಏಕಾಗ್ರತೆ, ಶ್ರದ್ದೆಯಿಂದ ಇಂದು ಮಣ್ಣಿನ ಹಾಗೂ ಫೈಬರ್ ಕಲಾಕೃತಿಗಳಿಂದ ಹೆಸರು ಮಾಡುತ್ತಿರುವ ಪ್ರತಿಭಾವಂತ ಕಲಾಕಾರ, ಮನೋಜ್ಞ ಕೈಚಳಕದ ಮನೋಜ್ ಕನಪಾಡಿಯವರು ಕಲಾ ನೈಪುಣ್ಯ ತೆಗೆ ಸಾಕ್ಷಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಸಮೀಪದ ಕನಪಾಡಿಯಲ್ಲಿ ಮನೋಜ್‌ರ ಜನಿಸಿದ್ದು, ಬಡತನದ ಜೀವನ. ಬಾಲ್ಯದಲ್ಲೇ ಚಿತ್ರಕಲೆಯ ಕುತೂಹಲ,ಆಸಕ್ತಿ ತುಡಿತ. ಕುಟುಂಬದವರು ಈ ಕಲೆಯ ಬೆನ್ನು ಬಿದ್ದವರಲ್ಲ, ಪ್ರಾರ್ಥಮಿಕ ಹಂತದಲ್ಲಿ ಶಿಕ್ಷಕರ ಮಾರ್ಗದರ್ಶನದಿಂದಲೇ ಕಲೆಯತ್ತ ಹೊರಳಿದವರು.
ಹಲವು ಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದದ್ದೇ ಸೂರ್ತಿ ಯಾಯಿತು. ಬಿದಿರು, ರಟ್ಟು, ತಾಳೆಗರಿಗಳೊಂದಿಗೆ ಪ್ರಯೋಗ, ಹೊಸ ಕಲಾ ಪ್ರಕಾರಗಳ ಸೃಷ್ಟಿಸಿರುವರು. ಮುಂದೆ ಮಹಾಲಸಾ ಚಿತ್ರ ಶಾಲೆಯಲ್ಲಿ ಡಿಪ್ಲೋಮಾ ಪದವಿ ಪಡೆದು ವೃತ್ತಿ ಬದುಕಿಗೆ ಚಿತ್ರ ಕಲೆಯನ್ನೇ ಆಯ್ಕೆ ಮಾಡಿದರು. ಕಲಿತ ವಿದ್ಯೆ ಹಾಗೂ ತನ್ನ ತುಡಿತದ ಫಲವಾಗಿ ಜಲವರ್ಣ ಹಾಗೂ ಮೈಸೂರ್ ಸಂಪ್ರದಾಯಿಕ ಚಿತ್ರ ಕಲೆಯಲ್ಲಿ ಅದ್ವಿತೀಯ ಸಾಧನೆ,ಸ್ಪೆರೇ ಪೇಂಟಿಂಗ್ ನಲ್ಲೂ ಅನುಭವ ಪಡೆದು, ತನಗೆ ತಿಳಿದಿರುವ ಚಿತ್ರಕಲಾ ಅನುಭವ ಹಾಗೂ ಅನುಭಾವವನ್ನು ಶಾಲಾ ಗುರುವಾಗಿ, ಶಿಬಿರಗಳಲ್ಲಿ ಸಂಪನ್ಮೂಲಗ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ,ಕಲಿಯುವ ಆಸಕ್ತಿ ಇರುವ ಇತರರಿಗೆ ಧಾರೆ ಎರೆಯುವ ಸಹೃದಯಿ.
ಸೂಜಿಗಲ್ಲಿನಂತೆ ಜನರನ್ನು ಆಕರ್ಷಿಸುತ್ತದೆ. ಮುಂದೆ ಅಕ ಬಾಳಿಕೆ ಬರುವ ಫೈಬರ್ ಕಲಾಕೃತಿಗಳತ್ತ ಒಲವು, ಒಮ್ಮೆ ಮನಸ್ಸಿನಲ್ಲಿ ಗ್ರಹಿಸಿದರೆ ಅದೇ ಪಡಿಯಚ್ಚು ಕಲಾಕೃತಿಯಾಗಿ ಮೂಡಿಸುವ ಜಾಣ್ಮೆ, ಜನರ ಬೇಡಿಕೆಗೆ ತಕ್ಕಂತೆ ಸೃಷ್ಟಿಸುವ ಚಾಕಚಕ್ಯತೆ ಮನೋಜ್‌ರಿಗೆ ಕರಗತ.
ಮುಖವಾಡ ತಯಾರಿ, ಟ್ಯಾಬ್ಲೋ ಕಲಾಕೃತಿ,ಉದ್ಯಾನವನ, ಅಲಂಕಾರಿಕ ವಸ್ತು, ಆಕರ್ಷಕ ವೇದಿಕೆ ನಿರ್ಮಾಣ, ಕಾರಂಜಿ ಫೈಬರ್ ಬಿದಿರು ಬೇಲಿ ನಿರ್ಮಾಣದಲ್ಲೂ ಇವರದ್ದು ಎತ್ತಿದ ಕೈ, ಚಿಕ್ಕ ಹಕ್ಕಿಯಿಂದ ಹಿಡಿದು ಆಲೆತ್ತರದ ಜಿರಾಫೆಯವರೆಗೂ ಮನೋಜ್ಞ ಕಲಾಕೃತಿ ರಚಿಸುವ ಮನೋಜ್ ರವರು ಹಿಡಿದ ಕೆಲಸವನ್ನು ಬಹಳ ಖುಷಿ ಹಾಗೂ ಆಸಕ್ತಿಯಿಂದ ಮಾಡುವ ನಿಪುಣ.
ಒಟ್ಟಿನಲ್ಲಿ ಕಲಾ ಕ್ಷೇತ್ರದ ಪ್ರತಿಯೊಂದು ಪ್ರಕಾರಗಳನ್ನು ಬಲ್ಲವರಾಗಿರುವ ಇವರ ಕಲಾಕೃತಿಗಳಿಗೆ ಹೊರ ಜಿಲ್ಲೆಗಳಿಂದಲೂ ಬೇಡಿಕೆ ಇರುವುದು ಇವರ ಕಲಾ ಪ್ರೌಡಿಮೆಗೆ ಸಾಕ್ಷಿ, ಕಲಾ ವೃತ್ತಿಯಿಂದ ಜೀವನ ನಿರ್ವಹಣೆಯೊಂದಿಗೆ ಸಮಾಜದಲ್ಲಿ ಗೌರವಯುತ ಬದುಕು ಸಾಧ್ಯ ಎನ್ನುದನ್ನು ತೋರಿಸಿದ ಕಲಾ ಚತುರ.
ಬರಹ: ಯಾಧವ ಕುಲಾಲ್