ಬಜ್ಪೆ:ಕಾಂಕ್ರಿಟೀಕರಣಗೊಂಡ ರಸ್ತೆಗಳು,ಸ್ವಾಗತಿಸುವ ಪ್ರವೇಶ ದ್ವಾರ,ಕಣ್ಮನ ಸೆಳೆಯುವ ಹಚ್ಚ ಹಸಿರು ಗಾರ್ಡನ್ ಅದರ ನಡುವೆ ಜಪನಿರತ ಭಂಗಿಯ ಶಿವನ ಮೂರ್ತಿ ಕೈಯಲ್ಲಿ ಆರಡಿ ಎತ್ತರದ ತ್ರಿಶೂಲ,ಸ್ಥಳ ಕಾಯುತ್ತಿರುವ ಹರಿಶ್ಚಂದ್ರ,ಸುತ್ತಲೂ ನೆಲಕ್ಕೆ ಹಾಸಲಾದ ಬ್ಲಾಕ್ ಅಂದಹಾಗೆ ಇದ್ಯಾವೂದೋ ಶಿವ ದೇಗುಲದ ವರ್ಣನೆಯಲ್ಲ ಹದಿಮೂರು ವರುಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದ ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಮುಂಡಬೆಟ್ಟು ಎಂಬಲ್ಲಿ ಪುನಶ್ಚೇತನಗೊಂಡು ದೇವಭೂಮಿಯಂತೆ ಕಂಗೊಳಿಸುತ್ತಿರುವ ಹಿಂದೂ ರುಧ್ರಭೂಮಿ.
ರುದ್ರಭೂಮಿ ಹಸಿರು ಉದ್ಯಾನವನದ ನಡುವೆ ಜಪನಿರತ ಶಿವ
ಹೌದು..2003,ಡಿಸೆಂಬರ್ನಲ್ಲಿ ಇಲ್ಲಿನ ರುದ್ರಭೂಮಿ ಅಂದು ಶಾಸಕರಾಗಿದ್ದ ರಮಾನಾಥ ರೈಯವರಿಂದ ನೆರವೇರಿದ್ದು ಅನೇಕ ಕಾರಣಗಳಿಂದ ರುದ್ರಭೂಮಿಯು ಕಾರ್ಯನಿರ್ವಹಿಸಿದೇ ಪಾಳು ಬಿದ್ದಿತ್ತು,ಹದಿಮೂರು ವರುಷಗಳ ನಂತರ ಇಂದು ಮತ್ತೆ ಸುಮಾರು ಒಂದು ಎಕರೆ ಜಾಗದಲ್ಲಿ 40 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡು ಮಾರ್ಚ್ 26 ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರಿಂದ ಉದ್ಘಾಟನೆಗೊಳ್ಳಲಿದೆ.
ಲಯಕರ್ತ ಶಿವನ ಪಾದದಡಿಯಲ್ಲಿ ಅವಸಾನ ಹೊಂದುವ ಭಾಗ್ಯ :
ರುದ್ರಭೂಮಿಗೆ ಇಷ್ಟೊಂದು ವರ್ಣನೆ ಏಕೆ..? ಎಂಬ ಪ್ರಶ್ನೆ ಇಲ್ಲಿ ಮೂಡಬಹುದು.ಹುಟ್ಟು ಹೇಗೆ ಶುಭ ಶಕುನವೋ ಅದರಂತೆ ಸಾವೂ ಕೂಡ,ಅದು ಒಂದು ಜನ್ಮಕ್ಕೆ ಮುಕ್ತಿ ಕೊಡಿಸಿ ಮತ್ತೊಂದು ಜನ್ಮಕ್ಕೆ ಕಳಿಸಿಕೊಡುವ ಪ್ರಕ್ರೀಯೆ ಇಂತಹ ಕಾರ್ಯ ಪುಣ್ಯದ ಕೆಲಸ ಎಂದು ಹಿಂದು ಧರ್ಮ ಹೇಳುತ್ತದೆ.ಅದರಲ್ಲೂ ಮುಂಡಬೆಟ್ಟುವಿನಲ್ಲಿ ನಿಮಿರ್ತವಾದ ರುದ್ರಭೂಮಿಯು ದೇವಭೂಮಿಯಾಗಿ ನಿರ್ಮಿಸಿದ್ದು ಮರಣ ನಂತರ ನಡೆಯುವ ವಿಧಿವಿಧಾನಗಳು ಲಯಕರ್ತ ಶಿವನ ಪಾದದಡಿಯಲ್ಲಿ ಅಂದರೆ ದೇವಸ್ಥಾನದ ಪರಿಸರದಲ್ಲಿ ನಡೆಯುತ್ತಿರುವ ಭಾವನೆ ಕುಟುಂಬಿಕರಲ್ಲಿ ಮೂಡಲಿ ಅದರಂತೆ ಶಿವನಲ್ಲಿ ಐಕ್ಯವಾಗಲಿ ಎಂಬ ಉದ್ದೇಶದಿಂದ ಈ ರುದ್ರಭೂಮಿಯನ್ನು ದೇವ ಭೂಮಿಯ ಪರಿಕಲ್ಪನೆಯಡಿಯಲ್ಲಿ ನಿರ್ಮಿಸಲಾಗಿದೆ. 
ಸರ್ವರ ಸಹಕಾರದಿಂದ ನಿರ್ಮಾಣ :
ಹಿಂದು ರುದ್ರಭೂಮಿಯನ್ನು ನವೀಕರಿಸಬೇಕೆಂದು ಪಣತೊಟ್ಟ ಗ್ರಾಮದ ಮುತ್ಸಾದಿಗಳು ಸಾರ್ವಜನಿಕರನ್ನು ಹುರಿದುಂಬಿಸಿ ಹಿಂದು ರುದ್ರಭೂಮಿ ಸಮಿತಿ ನಿರ್ಮಿಸಿ ಗ್ರಾಮ ಪಂಚಾಯತ್,ತಾಲೂಕು ಪಂಚಾಯತ್,ಜಿಲ್ಲಾ ಪಂಚಾಯತ್,ಶಾಸಕರು,ಸಂಸದರು,ಎಂಎಲ್ಸಿ ಹೀಗೆ ಸಿಕ್ಕ ಸಿಕ್ಕವರಿಂದ ಅನುದಾನ ಗಿಟ್ಟಿಸಿಕೊಂಡು ಎಲ್ಲರನ್ನೂ ಸೇರಿಸಿ ಜಿಲ್ಲೆಯ ಬೇರೆ ಬೇರೆ ರುದ್ರಭೂಮಿ ಬೇಟಿ ನೀಡಿ ಅದರಲ್ಲಿ ಉತ್ತಮವಾದ ಅಂಶಗಳನ್ನು ಅಳವಡಿಸಿ ಇಂದು ಮುಂಡಬೆಟ್ಟುವಿನಲ್ಲಿ ಸುಸಜ್ಜಿತವಾದ ರುದ್ರಭೂಮಿ ನಿರ್ಮಾಣವಾಗಿದೆ.
ಒಂದು ವರುಷದ ಅವಿರತ ಶ್ರಮ:-
ಸುತ್ತ ಗ್ರಾಮದ ಜನರು ಮರಣ ಸಂಭವಿಸಿದರೆ ಕೈಕಂಬ ರುದ್ರಭೂಮಿಗೆ ತರಬೇಕಾಗಿದ್ದು ಬೇರ್ಯಾವೂದೇ ರುದ್ರಭೂಮಿಗಳಿಲ್ಲದೆ ಹಲವು ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದರು.ಇದನ್ನು ಗಮನಿಸಿ ಮೂಡುಪೆರಾರ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಅಮೀನ್,ತನ್ಯಗುತ್ತು ಮೋನಪ್ಪ ಬಂಗೇರ,ನವೀನಚಂದ್ರ,ಮಾಜಿ ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ,ಎಂ.ರಮೇಶ್ ಮೇಸ್ತ್ರಿ,ಸುರೇಶ್ ಅಂಚನ್,ಶಂಕರ ಅಡಪ ಪೆರೀರ್,ಭಾಸ್ಕರ್ ಶೆಟ್ಟಿ,ಗ್ರಾಮ ಪಂಚಾಯತ್ ಸದಸ್ಯ ಯಶವಂತ ಪೂಜಾರಿ,ರಂಗನಾಥ ಭಂಡಾರಿ,ಗಣೇಶ್ ಪೂಜಾರಿ,ಪದ್ಮನಾಭ ನೀರಳಿಕೆ ಇವರುಗಳು ಜೊತೆ ಸೇರಿ ಹಿಂದು ರುದ್ರಭೂಮಿ ಅಭಿವೃದ್ಧಿ ಸಮಿತಿ ರಚಿಸಿ ಆ ಮೂಲಕ ರೂಪುರೇಷೆ ಸಿದ್ಧಗೊಳಿಸಿ ಸತತ ಒಂದು ವರುಷ ಸಾರ್ವಜನಿಕರನ್ನು ಪ್ರೆರೇಪಿಸುತ್ತ,ವಿವಿಧ ಅನುದಾನ,ಗಣ್ಯರ ಸಹಾಯಹಸ್ತ ಪಡೆಯುತ್ತ ಸುಸಜ್ಜಿತ ಹಿಂದು ರುದ್ರಭೂಮಿಯ ರಚನೆ ಮುಂಡಬೆಟ್ಟುವಿನಲ್ಲಿ ಆಗಿದೆ.ಮುಂದೆ ಒಂದು ಎಕರೆಯಲ್ಲಿ ಉಳಿದ ಜಾಗದಲ್ಲಿ ಸಸ್ಯಗಳನ್ನು ನೆಟ್ಟು ಹಸಿರಾಗಿಸುವ ಉದ್ದೇಶವಿದೆ ಎನ್ನುತ್ತಾರೆ ರಮೇಶ್ ಮೇಸ್ತ್ರಿ
ಭಾನುವಾರ ಬೆಳಿಗ್ಗೆ ಗಣಹೋಮ,11 ಗಂಟೆಗೆ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಿಜಾರು ಶ್ರಿಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಜಿಲ್ಲ ಉಸ್ತುವಾರಿ ಸಚಿವ ರಮಾನಾಥ ರೈ,ಸಂಸದ ನಳೀನ್ ಕುಮಾರ್ ಕಟೀಲು,ಶಾಸಕ ಮೊೈದೀನ್ ಬಾವಾ,ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಪೂಜಾರಿ,ಪ್ರತಾಪ್ಚಂದ್ರ ಶೆಟ್ಟಿ,ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್,ಜಿ.ಪಂ ಸದಸ್ಯ ಜನಾರ್ಧನ ಗೌಡ,ತಾ.ಪಂ ಸದಸ್ಯ ಪೂರ್ಣಿಮಾ ಗಣೇಶ್,ಜಯರಾಮ ನೆಲ್ಲಿತಾಯ,ಉಮರರಬ್ಬ,ರತ್ನಾಕರ ಶೆಟ್ಟಿ,ಶಿವಪ್ರಸಾದ್ ಕಾರ್ಕಳ,ಶಂಕರ ಸೇಮಿತ್,ಗಂಗಾಧರ ರೈ ಮುಂಡಬೆಟ್ಟುಗುತ್ತು,ಬಾಬು ಶೆಟ್ಟಿ ಪೆರಾರ,ಪಡುಪೆರಾರ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಾಂತ,ಪಂ.ಅಭಿವವೃದ್ಧಿ ಅಧಿಕಾರಿ ದಿನೇಶ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಅಮೀನ್,ತನ್ಯಗುತ್ತು ಮೋನಪ್ಪ ಬಂಗೇರ ಮುಂತಾದವರು ಉಪಸ್ಥಿತರಿರುವರು.
ರುದ್ರಭೂಮಿ ಕಾಯುತ್ತಿರುವ ಸತ್ಯಹರಿಶ್ಚಂದ್ರ
ಮಧ್ಯಾಹ್ನ 2ಕ್ಕೆ ಯಕ್ಷಮಿತ್ರರು ಮೂಡುಪೆರಾರ ಮತ್ತು ಈಶ್ವರಕಟ್ಟೆ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸತ್ಯ ಹರಿಶ್ಚಚಂದ್ರ ಯಕ್ಷಗಾನ ಬಯಲಾಟ ನಡೆಯಲಿದೆ.
ಹದಿಮೂರು ವರುಷಗಳಿಂದ ಪಾಳುಬಿದ್ದಿದ್ದ ಹಿಂದುರುದ್ರ ಭೂಮಿಯನ್ನು ದೇವಭೂಮಿಯಾಗಿ ಸರ್ವರ ಸಹಕಾರದೊಂದಿಗೆ ನವೀಕರಿಸಿದ್ದು,ಮರಣನಂತರ ವ್ಯಕ್ತಿಯ ದೇಹವು ಲಯಕರ್ತ ಶಿವನ ಸಾನಿಧ್ಯದಲ್ಲಿ ಮುಕ್ತಿ ಹೊಂದಿ ಅವನಲ್ಲಿ ಐಕ್ಯವಾದ ಭಾವನೆ ಕುಟುಂಬಿಕರಲ್ಲಿ ಮೂಡಲಿ ಎಂಬ ಉದ್ದೇಶದಿಂದ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ರುದ್ರಭೂಮಿ ನಿರ್ಮಾಣವಾಗಿದೆ
ಪದ್ಮನಾಭ ಪೂಜಾರಿ,ಮಾಜಿ ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷ



