ಸುದ್ದಿ9ಬಜ್ಪೆ: ಬೈಕ್ ಅಪಘಾತಕ್ಕೆ ಮಾಜಿ ಪಂ. ಸದಸ್ಯರೋರ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಸಮೀಪದ ನಾರಳಪದವು ತಿರುವು ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಮೃತಪಟ್ಟವರನ್ನು ಮೊಗರು ಹೊಸಮನೆ ನಿವಾಸಿ ಭಾಸ್ಕರ ಆಳ್ವ(45) ಎಂದು ಗುರುತಿಸಲಾಗಿದೆ.
ಬಜ್ಪೆ ವಿಮಾನನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಬೆಳಿಗ್ಗೆ ಸುಮಾರು ಐದು ಗಂಟೆಯ ಸುಮಾರಿಗೆ ತನ್ನ ಕೆಲಸ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭ ನಾರಳಪದವು ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಆಗಿ ಬಿದ್ದು ಈ ಅಪಘಾತ ಸಂಭವಿಸಿತು ಎನ್ನಲಾಗಿದೆ. ನಾರಳಪದವು ನಿರ್ಜನ ಪ್ರದೇಶವಾಗಿರುವುದರಿಂದ ಇವರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವರ ಪ್ರಕಾರ ಲಾರಿ ಡಿಕ್ಕಿ ಸಂಭವಿಸಿ ಬೈಕ್ನಿಂದ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸುತ್ತಿದ್ದಾರೆ. ಅಥವಾ ರಸ್ತೆಯ ಮಧ್ಯೆ ಹಸುವೊಂದು ಮಲಗಿದ್ದು ಇದನ್ನು ತಪ್ಪಿಸಲೆಂದು ಹೋಗುವಾಗ ಬೈಕ್ನ ನಿಯಂತ್ರಣ ಕಳೆದುಕೊಂಡು ಕಮರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರಬಹುದೆಂದು ಇನ್ನೊಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇದು ತಿರುವು ರಸ್ತೆಯಾಗಿದ್ದು ಎರಡು ವರ್ಷಗಳ ಮುಂಚೆ ಇದೇ ಜಾಗದಲ್ಲಿ ವ್ಯಕ್ತಿಯೊಬ್ಬರು ಅಪಘಾತಕ್ಕೆ ಬಲಿಯಾಗಿ ದಾರುಣವಾಗಿ ಮೃತಪಟ್ಟಿದ್ದರು.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಲೋಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ತನ್ನ ಕೆಲಸ ಮುಗಿಸಿ ವಾಪಸಾಗುತ್ತಿದ್ದರು. ಯಾವಾಗಲೂ ತನ್ನ ಸೋದರ ಸಚಿನ್ ಎಂಬವವರೊಂದಿಗೆ ಬರುತ್ತಿದ್ದ ಇವರು ಅವರಿಗೆ ತನ್ನ ಸಂಬಂಧಿಕರೊಬ್ಬರಿಗೆ ಹೆಣ್ಣುನೋಡುವ ಶಾಸ್ತ್ರವಿದ್ದುದರಿಂದ ಇವರು ನಿನ್ನೆ ಒಬ್ಬರೇ ಬಂದಿದ್ದರು. ಅಲ್ಲದೆ ತನ್ನ ಬೈಕನ್ನು ವೇಗವಾಗಿ ಚಾಲಾಯಿಸುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಂಜಿಮಠ ಪಂಚಾಯತ್ನ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರಾಗಿದ್ದ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತನ್ನ ಒಂದೂವರೆ ವರ್ಷದ ಮಗುವಿಗೆ ಗೊಂಬೆಯ ಆಟಿಕೆಯೊಂದನ್ನು ತಂದಿದ್ದು ಅದು ಅವರ ಕಿಸೆಯಲ್ಲೇ ಇತ್ತು. ಬೈಕ್ನಿಂದ ಬಿದ್ದ ಪರಿಣಾಮ ಇವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಂಜಿಮಠ ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ಮಾರ್ಟಂ ನಡೆಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಅವರ ಅಂತ್ಯಸಂಸ್ಕಾರ ನಡೆಸಲಾಯ್ತು. ಹಲವಾರು ಮಂದಿ ಗಣ್ಯರು ಆಗಮಿಸಿದ್ದರು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

002--

0002

By suddi9

Leave a Reply

Your email address will not be published. Required fields are marked *