ಸುದ್ಬದಿ9 ಬಜ್ಪೆ : ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರ್-ಹುಣ್ಸೆಕಟ್ಟೆ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನಕೋರೆಗಳ ಗಡಿ ಸರ್ವೆಗೆ ತಹಶೀಲ್ದಾರ್, ತಾಲೂಕು ಸರ್ವೆಯರ್ ಹಾಗೂ ಅಧಿಕಾರಿಗಳ ತಂಡ ಬುಧವಾರ ಮುಂಜಾನೆ ಬರುವುದಾಗಿ ಹೇಳಿದ್ದರೂ ತಹಶೀಲ್ದಾರ್ ಆಗಮಿಸದೆ ಇದ್ದು, ಮಧ್ಯಾಹ್ನದ ಬಳಿಕ ಆಗಮಿಸಿದ ತಾಲೂಕು ಸರ್ವೆಯರ್ ಸರ್ವೆ ನಡೆಸದೆ `ನೀವು ನೀವೇ ಸರ್ವೆ ನಡೆಸಿ ನನಗೆ ಮಾಹಿತಿ ಕೊಡಿ’ ಎಂದು ಕೋರೆ ಮಾಲಕರಲ್ಲಿ ಹೇಳಿ ನಿರ್ಗಮಿಸಿದ ಘಟನೆ ನಡೆದಿದೆ. ಅಕ್ರಮ ಕರಿಕಲ್ಲಿನ ಕೋರೆಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿ ನಾಗರಿಕರು ಮುಂಜಾನೆಯಿಂದಲೇ ಒಟ್ಟು ಸೇರಿದ್ದರೂ ಸ್ಥಳಕ್ಕೆ ಬಂದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನಾಗೇಂದ್ರಪ್ಪ ಅವರು ತಹಶೀಲ್ದಾರ್ ಬಂದಿಲ್ಲವೆಂದು ತಿಳಿದು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ಆಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು ಇದರ ಹಿಂದೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
1 ಕೋರೆಯಿಂದಾಗಿ ವನಾಶದತ್ತ ಹೊರಟಿರುವ ಕಂಗು ತೋಟ
ಸ್ಥಳೀಯರು ಅಕ್ರಮ ಎಂದು ಆರೋಪಿಸುತ್ತಿರುವ ಕಲ್ಲಿನ ಕೋರೆ
ಹುಣ್ಸೆಕಟ್ಟೆಯ ಸರ್ವೆ ನಂಬ್ರ 99 ಹಾಗೂ 99 ಪಿ 1ರಲ್ಲಿ ರಾಜೇಶ್ ಆಚಾರ್ಯ, 132-2ರಲ್ಲಿ ಪೆರ್ಮುದೆಯ ಕಣ್ಣನ್, 136-1ಪಿಯಲ್ಲಿ ಮಹಾಬಲ ಸುವರ್ಣ, 99ರಲ್ಲಿ ರಾಬರ್ಟ್ ಮಿನೇಜಸ್, 143/1ಎಪಿ2ರಲ್ಲಿ ಕಣ್ಣನ್ ಸೋದರ ರಾಜ ಎಂಬವರು ಕಲ್ಲಿನ ಕೋರೆಯನ್ನು ನಡೆಸುತ್ತಿದ್ದಾರೆ. ಅಕ್ಕಪಕ್ಕ ಒಂದಕ್ಕೊಂದು ತಾಗಿಕೊಂಡೇ ಇರುವ ಆರು ಕಲ್ಲಿನ ಕೋರೆಗಳಿಂದಲೂ ಪ್ರತಿನಿತ್ಯ 50-60 ಲೋಡ್ಗಳಷ್ಟು ಜಲ್ಲಿಕಲ್ಲು ತೆಗೆದು ಸಾಗಿಸಲಾಗುತ್ತಿದೆ. ಸಮಯದ ಪರಿವೆಯೇ ಇಲ್ಲದೆ ಸ್ಫೋಟಕ ಬಳಸಿ ಬಂಡೆ ಒಡೆದು ಜಲ್ಲಿ ಸಾಗಿಸುತ್ತಿದ್ದಾರೆ. ಹುಣ್ಸೆಕಟ್ಟೆಯ ಗಣಿಗಾರಿಕೆ ನಡೆಯುವ ಸರ್ವೆ ನಂಬ್ರದಲ್ಲಿ ಕೆಲವು ಮಾತ್ರ ಗಣಿಗಾರಿಕೆ ಇಲಾಖೆಯಿಂದ ಅನುಮತಿ ಪಡೆದಿದ್ದರೆ ಉಳಿದವುಗಳಲ್ಲಿ ಬೋಗಸ್ ಸರ್ವೆ ನಂಬ್ರದಿಂದ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದನ್ನು ಪ್ರಶ್ನಿಸಿ ನಾಗರಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದಾಖಲೆಯನ್ನು ಪಡೆದಿದ್ದರು.
ದಾಖಲೆಯ ಪ್ರಕಾರ ಕಣ್ಣನ್ ಹಾಗೂ ಆತನ ಸೋದರ ರಾಜಾ ನಡೆಸುತ್ತಿರುವ ಕರಿಕಲ್ಲಿನ ಕೋರೆ ಅಕ್ರಮ ಎಂಬುದು ಬಯಲಿಗೆ ಬಂದಿದೆ. ಇಷ್ಟೇ ಅಲ್ಲದೆ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ 200 ಮೀಟರ್ ಅಂತರದಲ್ಲಿ ಮನೆ ಅಥವಾ ಆಸ್ತಿಪಾಸ್ತಿ ಇರಬಾರದು ಎಂಬ ನಿಯಮಾವಳಿ ಇದ್ದರೂ ಇಲ್ಲಿ ಮನೆಗಳ ಕೆಲವೇ ಮೀಟರ್ ಅಂತರದಲ್ಲಿ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿತ್ತು. ಇದರಿಂದ ಸಮೀಪದ ದುರ್ಗಾ ನಗರ, ಮಾಲೇವು, ಹುಣ್ಸೆಕಟ್ಟೆ ಗ್ರಾಮಗಳ ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿತ್ತು. ಈ ಬಗ್ಗೆ ಕಳೆದ ವಾರ ನಡೆದಿದ್ದ ಎಕ್ಕಾರ್ ಗ್ರಾಮಸಭೆಯಲ್ಲಿ ಸಾರ್ವಜನಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನಾಗೇಂದ್ರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದು ಜುಲೈ 2ರಂದು ಮರುಸರ್ವೆ ನಡೆಸುವುದಾಗಿ ಅಧಿಕಾರಿ ಭರವಸೆ ನೀಡಿದ್ದರು.
`ನೀವೇ ಸರ್ವೆ ನಡೆಸಿ ನನಗೆ ಮಾಹಿತಿ ಕೊಡಿ’
ಬುಧವಾರ ಮುಂಜಾನೆ 10:30ಕ್ಕೆ ತಾಲೂಕು ಸರ್ವೆಯರ್, ತಹಶೀಲ್ದಾರ್ ಬರುವುದಾಗಿ ಹೇಳಿದ್ದರೂ ಮಧ್ಯಾಹ್ನದವರೆಗೆ ಯಾರೂ ಘಟನಾಸ್ಥಳಕ್ಕೆ ಬಂದಿರಲಿಲ್ಲ. ನಾಗೇಂದ್ರಪ್ಪ ಮಾತ್ರ ಸ್ಥಳದಲ್ಲಿದ್ದರು. ಮಧ್ಯಾಹ್ನ 2 ಗಂಟೆಯ ನಂತರ ತಾಲೂಕು ಸರ್ವೆಯರ್ ಗಂಗಾಧರ್ ಮೂಲ್ಕಿ. ಸ್ಥಳಕ್ಕೆ ಆಗಮಿಸಿ ಕೋರೆಯ ಮಾಲಕರನ್ನು ಕರೆದು ತಹಶೀಲ್ದಾರ್ ಬ್ಯುಸಿಯಾಗಿದ್ದಾರೆ, ಅವರು ಬರುವುದಿಲ್ಲ. ನೀವು ನೀವೇ ಸ್ಥಳೀಯ ಸರ್ವೆಯರ್ ಅವರನ್ನು ಕರೆದುಕೊಂಡು ಬಂದು ಗಡಿ ಸರ್ವೆ ನಡೆಸಿ ಆಮೇಲೆ ನನಗೆ ಮಾಹಿತಿ ಕೊಡಿ’ ಎಂದು ವಾಪಸ್ ಆಗಿದ್ದಾರೆ. ಅಕ್ರಮ ಎಂದು ದೂರಿರುವ ಕೋರೆಯ ಮಾಲಕರನ್ನೇ ಕರೆದು ತಾಲೂಕು ಸರ್ವೆಯರ್ ನೀವೇ ಸರ್ವೆ ನಡೆಸಿ ಎನ್ನುವುದಾದರೆ ಅವರು ಸ್ಥಳಕ್ಕೆ ಬರುವ ಔಚಿತ್ಯವಾದರೂ ಏನಿತ್ತು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಪತ್ರಕರ್ತರಲ್ಲಿ ಸ್ಥಳಿಯರ ಹೇಳಿಕೆ
ಕೋರೆಯವರ ಬಗ್ಗೆ ಸ್ವಲ್ಪ ಜಾಗೃತರಾಗಿ ಎಂದು ಅಲ್ಲಿಗೆ ವರದಿಗೆ ತೆರಳಿದ್ದ ಪತ್ರಕರ್ತರಲ್ಲಿ ಸ್ಥಳೀಯರು ಹೇಳಿಕೊಂಡ ಘಟನೆ ನಡೆದಿದೆ. ಇದಕ್ಕಿಂತ ಮುಂಚೆಯೂ ನಮಗೆ ಕೋರೆ ಮಾಲಕರು ಜೀವಬೆದರಿಕೆ ಒಡ್ಡಿದ್ದಾರೆಂಬುದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಸ್ಥಳದ ಫೋಟೋ ತೆಗೆಯಬಾರೆಂದು ಆಕ್ಷೇಪಿಸಿದ ಘಟನೆಯೂ ನಡೆದಿತ್ತು. ಇವರ ಬೆದರಿಕೆಗೆ ಸ್ಥಳೀಯರೂ ಸಹ ಉಡುಗಿ ಹೋಗಿದ್ದರು. ಆದರೆ ಸ್ಥಳಕ್ಕೆ ಬಂದವರು ಪತ್ರಕರ್ತರು ಎಂದು ತಿಳಿದಾಗ ಆಕ್ಷೇಪಿಸಿದವರು ಸುಮ್ಮನಾಗಿದ್ದಾರೆ.

