ಮುಂಬಯಿ: ಭಾರತ ರತ್ನ ಡಾ| ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ 120ನೇ ಜಯಂತಿ ಅಂಗವಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕೇಂದ್ರ ಸಾಂಸ್ಕೃತಿಕ ವಲಯ ಮಹಾರಾಷ್ಟ್ರ ಇವರು ಜಂಟಿಯಾಗಿ ಎರಡು ದಿನಗಳ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಾಂಸ್ಕೃತಿಕ ನಮನ ಸಮರ್ಪಣಾ ಕಾರ್ಯಕ್ರಮವನ್ನು ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಅಲ್ಲಿನ ಚೈತ್ಯಭೂಮಿಯ ವನಿತ ಸಮಾಜ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದವು.
ಇವತ್ತಿನ ಕಾರ್ಯಕ್ರಮದ ಮಧ್ಯಾಂತರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸ್ವರ ಪ್ರಿಂಟ್ ಆಂಡ್ ಪಬ್ಲಿಕೇಷನ್ ಬೆಂಗಳೂರು ಪ್ರಕಾಶಿತ ಮುಂಬಯಿಯಲ್ಲಿನ ಹಿರಿಯ ಸಾಹಿತಿ, ಅಂಕಣಕಾರ ರವಿ ರಾ.ಅಂಚನ್ ಅವರ `ಪ್ರಜಾಪ್ರಭುತ್ವ ಪೂಜೆಯೋ-ಪ್ರಜ್ಞೆಯೋ’, `ಬಹುರೂಪಿ ಭಾರತ’, `ಮತೀಯ ಹುಚ್ಚು-ಕೊಲೆಯ ಕಿಚ್ಚು’ ಮತ್ತು `ವಿವೇಕದ ನುಡಿ-ಸಮತೆಯ ಮುಡಿ’ ನಾಲ್ಕು ಕೃತಿಗಳನ್ನು ಕರ್ನಾಟಕ ರಾಜ್ಯದ ಹೆಸರಾಂತ ಲೇಖಕರಾದ ನಾಡೋಜ ಡಾ| ಸಿದ್ಧಲಿಂಗಯ್ಯ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದ ಆದಿಯಲ್ಲಿ ಡಾ| ಸಿದ್ಧಲಿಂಗಯ್ಯ ಅವರು ಡಾ| ಬಾಬಾ ಸಾಹೇಬ್ ಭೀಮ್ರಾವ್ ಅಂಬೇಡ್ಕರ್ ಅವರ ಚೈತ್ಯ ಭೂಮಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕವಿಗೋಷ್ಠಿ ನಡೆಸಲ್ಪಟ್ಟಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಹೆಸರಾಂತ ಲೇಖಕರಾದ ನಾಡೋಜ ಹೆಸರಾಂತ ಚಿತ್ರಕಲಾವಿದರಾದ ಡಾ| ಸಿ.ಚಂದ್ರಶೇಖರ್, ಎಸ್ಎಸ್ಡಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ ಮಹಾರಾಷ್ಟ್ರ ವಲಯ ಅಧಿಕಾರಿ ಕೆ.ಗಣೇಶ್, ಹಿರಿಯ ಜಾನಪದ ಗಾಯಕ ಡಾ| ಅಪ್ಪಗೆರೆ ತಿಮ್ಮರಾಜು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯ ಸಂಘಟಕ ರವೀಂದ್ರನಾಥ ಶಿರವಾರ್ ಸ್ವಾಗತಿಸಿದರು. ಜೋಗಿಲ ಸಿದ್ಧರಾಜ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಎನ್.ಚಲವಾದಿ ಧನ್ಯವದಿಸಿದರು. ಗೋರೆಗಾಂ ಕರ್ನಾಟಕ ಸಂಘದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಸಂಗೀತ, ನೃತ್ಯರೂಪಕಗಳು, ಲಾವಣಿ, ವಿಚಾರ ಸಂಕಿರಣ ಚಿತ್ರಕಲಾ ಶಿಬಿರ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ನಡೆಸಲ್ಪಟ್ಟವು. ಉಭಯ ರಾಜ್ಯಗಳ ಸುಮಾರು 350ಕ್ಕೂ ಹೆಚ್ಚು ಕಲಾವಿದರು ಪಾಲೊಂಡು ಡಾ| ಬಾಬಾ ಸಾಹೇಬ್ ಭೀಮ್ರಾವ್ ಅಂಬೇಡ್ಕರ್ ಅವರಿಗೆ ಸಾಂಸ್ಕೃತಿಕ ನಮನ ಸಲ್ಲಿಸುವುದರ ಮುಖೇನ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಾಹಿತಿಕ ಮತ್ತು ಸಾಂಸ್ಕೃತಿಕವಾದ ಸೌಹಾರ್ಧಕ್ಕೆ ಪೂರಕವಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದಿಂದ 20ಕ್ಕೂ ಹೆಚ್ಚು ಚಿತ್ರಕಲಾವಿದರು, 10ಕ್ಕೂ ಹೆಚ್ಚು ಕವಿಗಳು, ಸುಮಾರು 270ಕ್ಕೂ ಮೀರಿದ ಜನಪದ, ಸುಗಮ ಸಂಗೀತ ಹಾಗೂ ನೃತ್ಯ ಕಲಾವಿದರು, ಸಂಘಟನೆಯ ವಿವಿಧ ಮುಖಂಡರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


