ಜೋಗೇಶ್ವರಿ ಮಜಾಸ್‌ವಾಡಿಯಲ್ಲಿನ ಶ್ರದ್ಧಾ ಕನ್‌ಸ್ಟ್ರ‍್ರಕ್ಷನ್ ನರ‍್ಲಕ್ಷ್ಯಕ್ಕೆ ಬಲಿಯಾದ ಸಂಸ್ಕೃತಿ ಅಮೀನ್
ಅಮಾಯಕ ಯುವತಿ ಸಾವಿನ ನ್ಯಾಯಕ್ಕೆ ಹೋರಾಟ ‘ಜಸ್ಟೀಸ್ ಫಾರ್ ಸಂಸ್ಕೃತಿ’ಸಿದ್ಧತೆ
ಮುಂಬಯಿ: ಕಳೆದ ಬುಧವಾರ ಉಪನಗರ ಜೋಗೇಶ್ವರಿ ಪೂರ್ವದ ಮಜಾಸ್‌ವಾಡಿಯ ಠಾಕೂರ್ ರಸ್ತೆಯಲ್ಲಿನ ಮಹಾರಾಜ ಭವನ ಪ್ರದೇಶದಲ್ಲಿ ಶಿವಕುಂಜ್ ಬಿಲ್ಡಿಂಗ್‌ನಿಂದ ಸಿಮೆಂಟ್ ಬ್ಲಾಕ್ ಬಿದ್ದು ತುಳು ಕನ್ನಡತಿ 22 ಹರೆಯದ ಯುವತಿ ಕು| ಸಂಸ್ಕೃತಿ ಅಮೀನ್ ಸ್ಥಳದಲ್ಲೇ ವಿಧಿವಶರಾಗಿದ್ದಾರೆ.

ಮಂಗಳೂರು ತಾಲೂಕು ಕಿನ್ನಿಗೋಳಿ ಹಳೆಯಂಗಡಿ ರಸ್ತೆಯಲ್ಲಿನ ಪಕ್ಷಿಕೆರೆ ಅಲ್ಲಿನ ಪದ್ಮಾವತಿ ಲಾನ್ ಎಂಡ್ ಮಲ್ಟಿಪರ್ಪಸ್ ಹಾಲ್ ಮತ್ತು ಮುಂಬಯಿಯಲ್ಲಿನ ಕೋಟ್ಯಾನ್ ಕ್ಯಾಟರರ್‍ಸ್‌ನ ಮಾಲೀಕ ಅನಿಲ್ ಅಮೀನ್ ಮತ್ತು ಪದ್ಮಾವತಿ ಅಮೀನ್ ದಂಪತಿಯ ಏಕೈಕ ಸುಪುತ್ರಿಯಾಗಿದ್ದ ಕು| ಸಂಸ್ಕೃತಿ ಅಮೀನ್ ಕಳೆದ ಬುಧವಾರ ಬೆಳಿಗ್ಗೆ ಕಚೇರಿಗೆ ತೆರಳಲು ಬೆಳಿಗ್ಗೆ ಮನೆಯ ಕೆಲವು ಮೀಟರ್ ದೂರದಲ್ಲೇ ಸಂಭವಿಸಿದ ಘಟನೆಗೆ ಬಲಿಯಾಗಿದ್ದಾರೆ.

ಜೋಗೇಶ್ವರಿ ಪೂರ್ವದ ಮಜಸ್ ರಸ್ತೆಯ ಕಿರಣದೇವಿ ದೇವೇಂದ್ರಸಿಂಗ್ ಚಾಳ್ ಸನಿಹದಲ್ಲಿ ಕಾಮಗಾರಿ ನಡೆಸುತ್ತಿದ್ದ ಕಟ್ಟಡದ ಸಿಮೆಂಟ್ ಬ್ಲಾಕ್ ಸಂಸ್ಕೃತಿ ಅಮೀನ್‌ಳ ತಲೆಗೆ ಬಿದ್ದು ತೀವ್ರ ಪೆಟ್ಟಾಗಿ ಕುಸಿದುಬಿದ್ದಿದ್ದರು. ಗಾಯಗೊಂಡ ಸಂಸ್ಕೃತಿಯನ್ನು ಕಂಡ ಆಕೆಯ ತಂದೆ ತಕ್ಷಣವೇ ಧಾವಿಸಿ ಬಂದ ಮಾತಾಪಿತರು ಜೀವನ್ಮರಣದಲ್ಲಿ ಒದ್ದಾಡುತ್ತಿದ್ದ ಮಗಳನ್ನು ಸ್ಥಾನಿಯ ಹೆಚ್‌ಬಿಟಿ ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಸಾವು ಸಂಭವಿಸಿದೆ ಎಂದು ಆಸ್ಪತ್ರೆಯ ಸಹಾಯಕ ಮೆಡಿಕಲ್ ವೈದ್ಯಾಧಿಕಾರಿ ಡಾ| ಉಜ್ಮಾ ಘೋಷಿಸಿದ್ದರು. ಶ್ರದ್ಧಾ ಕನ್‌ಸ್ಟ್ರ್ರಕ್ಷನ್‌ನ ನಿರ್ಲಕ್ಷ ಧೋರಣೆಯ ಆರೋಪದ ಮೇರೆಗೆ ಕಟ್ಟಡದ ನಿರ್ಮಾಪಕ, ಗುತ್ತಿಗೆದಾರ, ಎಂಜಿನಿಯರ್ ಮತ್ತು ಸೈಟ್ ಮೇಲ್ವಿಚಾರಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಶಿವಸೇನೆ-ಯುಬಿಟಿ ಧುರೀಣ, ಜೋಗೇಶ್ವರಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಅನಂತ್ (ಬಾಳ) ಬಿ.ನಾರ್, ಎಂಎನ್‌ಎಸ್ ಜೋಗೇಶ್ವರಿ ಪೂರ್ವ ಅಧ್ಯಕ್ಷ ಭರತ್ ಆರ್ಯ, ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ-ಎಸ್‌ಪಿ) ಮುಂಬಯಿ ಪ್ರದೇಶ ಉಪಾಧ್ಯಕ್ಷ ಲಕ್ಷ್ಮಣ್ ಸಿ.ಪೂಜಾರಿ ಚಿತ್ರಾಪು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ , ಜಯ ಸಿ.ಸುವರ್ಣ ಅಭಿಮಾನಿಸ್ ಮತ್ತು ಮುಂಬಯಿ ಬಿಲ್ಲವಸ್ ರೂವಾರಿ ಸೂರ್ಯಕಾಂತ್ ಜೆ.ಸುವರ್ಣ, ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ ತ್ರೀಕೆ ಪೂರ್ವ ಸಮಿತಿ ಸದಸ್ಯ. ಎನ್‌ಸಿಪಿ-ಎಸ್‌ಪಿ ಉತ್ತರ ಪಶ್ಚಿಮ ಜಿಲ್ಲಾ ಉಪಾದ್ಯಕ್ಷ ನಿರಂಜನ್ ಲಕ್ಷ್ಮಣ್ ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ನ ಜೊತೆ ಕೋಶಾಧಿಕಾರಿ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯ ಗೌರವ ಕಾರ್ಯದರ್ಶಿ ಸದಾಶಿವ ವೈ.ಕೋಟ್ಯಾನ್ ಪೊಸ್ರಲ್ ಸೇರಿದಂತೆ ಅಸೋಸಿಯೇಶನ್‌ನ ಪದಾಧಿಕಾರಿಗಳು, ಜೋಗೇಶ್ವರಿ ಸ್ಥಳೀಯ ಕಛೇರಿಯ ಪದಾಧಿಕಾರಿ, ಸದಸ್ಯರನೇಕರು ಸೇರಿದಂತೆ ಗಣ್ಯರನೇಕರು ಅಂತಿಮಕ್ರಿಯೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿ ಮೃತರ ಕುಟುಂಬಕ್ಕೆ ಸಾಂತ್ವನವಿತ್ತರು.
ಕಟ್ಟಡ ನಿರ್ಮಾಣದ ವೇಳೆ ನಿರಂತವಾಗಿ ಆಗುತ್ತಿರುವ ಅನಾಹುತ, ಅಪಘಾತ, ಸಾವುನೋವುಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ, ಬಿಎಂಸಿ, ಲೇಬರ್ ಇಲಾಖೆ, ಸೆಫ್ಟಿ ಆಡಿಟ್ ತಂಡ ಎಲ್ಲಿದೆ..? ಸೈಟ್ ಆರಂಭಿಸಲು ವಿವಿಧ ಇಲಾಖೆಗಳು ಅನುಮತಿ ನೀಡಿದ್ದರೆ. ಆದರೆ ಸುರಕ್ಷತಾ ಪರಿಶೀಲನೆ ಯಾಕೆ ಆಗಲಿಲ್ಲ, ಆಗಿಲ್ಲವಾದರೆ, ಈ ಜೀವಹಾನಿ ಇವೆಲ್ಲಾ ಇಲಾಖೆಗಳ ಹೊಣೆಗಾರಿಕೆಯಾಗಿದೆ. ಪ್ರತಿಬಾರಿ ಜೀವ ಹೋದಾಗ ಮಾತ್ರ ಫೈಲುಗಳು ಮುಂದೆ ಸರಿಯುವುದು ವಾಡಿಕೆಯಾಗಿದೆ. ಶ್ರದ್ಧಾ ಕನ್‌ಸ್ಟ್ರಕ್ಷನ್ ಹೆಸರಿನಲ್ಲಿ ಶ್ರದ್ಧೆ ಇದೆ, ಆದರೆ ವರ್ತನೆಯಲ್ಲಿ ನಿರ್ಲಕ್ಷ್ಯ ಸಲ್ಲದು. ನೀವು ಕಟ್ಟಡಗಳನ್ನು ನಿರ್ಮಿಸುತ್ತಿದ್ದೀರಾ ಅಥವಾ ಸಮಾಧಿಗಳನ್ನು ಸೃಷ್ಠಿಸುತ್ತಿದ್ದೀರಾ ಎಂದು ಲಕ್ಷ್ಮಣ್ ಪೂಜಾರಿ ಚಿತ್ರಾಪು ಕಟುವಾಗಿ ಪ್ರೆಶ್ನಿಸಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.
ಜೋಗೇಶ್ವರಿ ದೇವಭೂಮಿ ಪ್ರದೇಶ ಮಜಾಸ್‌ವಾಡಿಯಲ್ಲಿ ಶ್ರದ್ಧಾ ಕನ್‌ಸ್ಟ್ರ್ರಕ್ಷನ್ ಸಂಸ್ಥೆಯ ಸೈಟ್‌ನಲ್ಲಿ ಸಿಮೆಂಟ್ ಬ್ಲಾಕ್‌ವೊಂದು ಮೇಲಿಂದ ಬಿದ್ದು ಅಮಾಯಕ ಯುವತಿಯ ಪ್ರಾಣಪಕ್ಷಿ ಹಾರಿ ಹೋಯಿತು. ಕ್ಷಣಾರ್ಧದಲ್ಲೇ ಅಬಲೆಯ ಆತ್ಮವೊಂದು ಕೊನೆಕಂಡಿತು. ಕಾರಣ, ಡೆವಲಪರ್ ಮತ್ತು ಕನ್‌ಸ್ಟ್ರಕ್ಷನ್‌ಗಳ ನಿರ್ಲಕ್ಷ್ಯ. ಈ ಘಟನೆಯು ಜೋಗೇಶ್ವರಿ ಪ್ರದೇಶದಲ್ಲಿ ಅಕ್ಷರಶಃ ಮರಣಗಳ ಸರಣಿ ಆರಂಭವಾದಂತಾಗಿದೆ. ಮಹಾರಾಷ್ಟ್ರ ಸರ್ಕಾರದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆಯ ಪ್ರಕಾರ ಸುರಕ್ಷತೆ ಕಡ್ಡಾಯ. ಆದರೆ, ಪರವಾನಗಿ ಇದ್ದರೂ ಸುರಕ್ಷತೆ ಕ್ರಮವಿಲ್ಲದಿರುವುದು ಶೋಚನೀಯ. ಆದ್ದರಿಂದಲೇ ಕಟ್ಟಡದ ಕಾಮಗಾರಿ ಮರಣಕೂಪವಾಯಿತು ಎಂದು ಸೂರ್ಯಕಾಂತ್ ಸುವರ್ಣ ತಿಳಿಸಿದ್ದಾರೆ.
ಮೇಘವಾಡಿ ಪೊಲೀಸರಿಗೆ ಇದೀಗಲೇ ದೂರು ನೀಡಲಾಗಿದ್ದು ಮೃತ ಸಂಸ್ಕೃತಿ ಅವರ ತಂದೆ ಅನಿಲ್ ಅಮೀನ್ ಕಟ್ಟುನಿಟ್ಟಿನ ಕ್ರಮಕ್ಕಾಗಿ ಮತ್ತು ಸುಪುತ್ರಿಯ ಸಾವಿಗೆ ನ್ಯಾಯ ನೀಡುವರೇ ಬೇಡಿಕೆ ಇಟ್ಟಿದ್ದಾರೆ. ಶ್ರದ್ಧಾ ಡೆವಲಪರ್ ಮತ್ತು ಸಂಬಂಧಿತ ಕರ್ಮಚಾರಿಗಳ ವಿರುದ್ಧ ಗಂಭೀರ ಕಾನೂನು ಕ್ರಮಕೈಗೊಳ್ಳಬೇಕು. ಯಾವುದೇ ಜೀವಕ್ಕೆ ಅಪಾಯ ತರುವುದು ಇದು ತಪ್ಪು ಅಲ್ಲ. ಇದು ಅಪರಾಧ ಮತ್ತು ನಿರ್ಲಕ್ಷ ದಿಂದಾದ ಮರಣ ಎಂದು ನಿರಂಜನ್ ಲಕ್ಷ್ಮಣ್ ಪೂಜಾರಿ ತಿಳಿಸಿದ್ದಾರೆ.
ಜಸ್ಟೀಸ್ ಫಾರ್ ಸಂಸ್ಕೃತಿ ಅಮೀನ್:
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸದಸ್ಯರಾಗಿರುವ ಅನಿಲ್ ಅವಿನ್ ಪರಿವಾರದ ಏಕೈಕ ಸುಪುತ್ರಿ ನಿಧನಕ್ಕೆ ಹಾಗೂ ಮೃತಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್ ಮುಂದಾಳುತ್ವದಲ್ಲಿ ಶೀಘ್ರದಲ್ಲೇ ಜೋಗೇಶ್ವರಿಯಲ್ಲಿ ಜಸ್ಟೀಸ್ ಫಾರ್ ಸಂಸ್ಕೃತಿ ಎಂದು ಪ್ರತಿಭಟನೆ ನಡೆಸುವ ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ. ಇದು ಕೇವಲ ದುರ್ಘಟನೆ ಅಲ್ಲ, ಉಪೇಕ್ಷೆಯ ಮತ್ತು ನಿರ್ಲಕ್ಷ್ಯದ ಹತ್ಯೆ ಎನ್ನಬಹುದು. ಈ ಘಟನೆಯಿಂದ ಸ್ಥಾನಿಯ ನಾಗರೀಕರೆಲ್ಲರೂ ಎಚ್ಚೆತ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಬೇಕು. ನ್ಯಾಯಕ್ಕಾಗಿ ನಮ್ಮ ಹೋರಾಟ ನಡೆಯಲಿದೆ ಎಂದು ಹರೀಶ್ ಜಿ.ಅವಿನ್ ತಿಳಿಸಿದ್ದಾರೆ
ಕೃಪೆ:; ರೋನ್ಸ್ ಬಂಟ್ವಾಳ್



