ಮುಂಬಯಿ: ಉಪನಗರ ವಿೂರಾರೋಡ್ ಪೂರ್ವದ ನಿತ್ಯಾನಂದ ನಗರದ ಗೌರವ್‍ಗ್ಯಾಲಕ್ಸಿ ಅಲ್ಲಿನ ಕಾರಣಿಕ ಕ್ಷೇತ್ರ ಎಂದೇ ಹೆಸರಾಂತ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯ ಹತ್ತೊಂಬತ್ತನೇ ವಾರ್ಷಿಕ ಮಹಾಪೂಜೆಯು ಇಂದಿಲ್ಲಿ ರವಿವಾರ ಶ್ರೀಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಸಂಪನ್ನ ಗೊಂಡಿತು.
ಪಂಚಮಾಣಿಕ್ಯ ನಾಗ ಸನ್ನಿಧಿ ಸಂಸ್ಥಾಪಕ ಮತ್ತು ಪ್ರಧಾನ ಅರ್ಚಕ ಲೀಲಾಧರ ಕರ್ಕೇರ ದಂಪತಿ ನೇತೃತ್ವದಲ್ಲಿ ವಾರ್ಷಿಕ ಮಹಾಪೂಜೆ ನಿಮಿತ್ತ ಮುಂಜಾನೆಯಿಂದ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಸಾದ ವಿತರಣೆ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿಸಲ್ಪಟ್ಟವು. ವಿೂರಾಗಾಂವ್‍ನ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್ ಶಾಸ್ತ್ರೋಕ್ತವಾಗಿ ಪೂಜಾಧಿಗಳನ್ನು ನೇರವೇರಿದ್ದು, ಕಲ್ಲಂಗಳ ಪೆರ್ಡೂರು ನಾಗಪಾತ್ರಿ ಶ್ರೀ ರಾಮಚಂದ್ರ ಕುಂಜಿತ್ತಾಯ ಅವರು ನಾಗದರ್ಶನಗೈದು ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ವಿಠಲ ಪೂಜಾರಿ ಸುರತ್ಕಲ್ ಅವರ ಸಾರಥ್ಯದಲ್ಲಿ ದೈವ ಶುದ್ಧೀಕರಣ, ದೈವಗಳ ಭಂಡಾರ, ಪಾಣೆಮಂಗಳೂರು ಪಣೋಲಿಬೈಲು ತಂಡವು ಸತ್ಯದೇವತೆ, ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ದೈವಗಳಿಗೆ ಗಗ್ಗರ (ಕೋಲ) ಸೇವೆ ನಡೆಸಿದರು. ನಾಗದೇವರ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಸಲ್ಪಟ್ಟಿತು.
ಅತಿಥಿsಗಳಾಗಿ ಶಾಸಕ ನರೇಂದ್ರ ಮ್ಹೆಥಾ, ಮೇಯರ್ ಗೀತಾ ಜೈನ್, ನಗರ ಸೇವಕರುಗಳಾದ ಪ್ರಶಾಂತ್ ದಾಳ್ವಿ, ಬೊಯಿರ್ ಸೇರಿದಂತೆ ಅನೇಕ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಸಾವಿರಾರು ಭಕ್ತಾಧಿಗಲು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದ ಮಧ್ಯಾಂತರದಲ್ಲಿ ಗಣ್ಯರಿಗೆ ಗೌರವಾರ್ಪಣೆ ನಡೆಸಲಾಗಿದ್ದು, ದಯಾರಾಜ್ ಕುಂದರ್, ಕುಮಾರ್ ಖಾರ್ವಿ, ರಾಮನ್, ದೀಪಕ್ ದಾಸ್ ಅವರು ಸನ್ಮಾನಿಸಿ ಗೌರವಿಸಿದರು.

ಪಂಚಮಾಣಿಕ್ಯ ಭಕ್ತವೃಂದದ ಗಿರೀಶ್ ಕರ್ಕೇರ, ಪುರುಷೋತ್ತಮ ಮಂಚಿ, ಲೀಲಾ ಪೂಜಾರಿ, ದೇವರಾಜ್ ಪೂಜಾರಿ, ನಾಗವೇಣಿ ಕರ್ಕೇರ, ಶೈವಲ್ ಕರ್ಕೇರ, ರವಿ ಕೋಟ್ಯಾನ್, ದೇವದಾಸ್ ಕರ್ಕೇರ, ಚೇತನ್ ಸಾಲ್ಯಾನ್, ಕೃಷ್ಣ ಸಾಲ್ಯಾನ್, ರವಿ ಕಾಂಚನ್, ಕೃಷ್ಣ ಪೂಜಾರಿ, ಚೇತನ್ ಅವಿೂನ್, ಗುಣಪಾಲ್ ಶೆಟ್ಟಿ, ಬಾಲಕೃಷ್ಣ ಕೋಟ್ಯಾನ್, ಪುರಂದರ ಶ್ರೀಯಾನ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

