ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಪ್ರವರ್ತಿತ ಎಲ್ಲಾ ಆರೂ ದಶವತಾರ ಮೇಳಗಳ ತಿರುಗಾಟ ನ.25 ಶುಕ್ರವಾರ ಪ್ರಾರಂಭಗೊಳ್ಳಲಿದ್ದು, ಡಿ.24 ಗುರುವಾರ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಎಲ್ಲಾ ಆರೂ ಮೇಳಗಳ ಸೇವೆಯಾಟ ನಡೆಯಲಿದ್ದು, ಏಕಕಾಲದಲ್ಲಿ ಆರು ರಂಗಸ್ಥಳಗಳಲ್ಲಿ ಯಕ್ಷಗಾನ ವಿಜೃಂಭಿಸಲಿದೆ.
ದೇವಿ ಸನ್ನಿಧಿಯಲ್ಲಿ ಗೆಜ್ಜೆನಾದ:
ದೇವಳದ ಒಳಾಂಗಣದಲ್ಲಿ ದೇವಿಯ ಗರ್ಭಗುಡಿಯೆದುರು ಆರು ಮೇಳಗಳ ಹನ್ನೆರಡು ಮಂದಿ ಕಲಾವಿದರಿಗೆ ಅಸ್ರಣ್ಣರು ಸಂಜೆ 5.30ಕ್ಕೆ ಗೆಜ್ಜೆ ಪ್ರದಾನ ಮಾಡುತ್ತಾರೆ. ಬಳಿಕ ಶ್ರೀದೇವರೆದುದು ಯಕ್ಷನಾಟ್ಯ ಸೇವೆ ಆರೂ ಮೇಳಗಳ ಭಾಗವತರ ಸ್ತುತಿಗೀತೆ ಹಾಗೂ ಹಿಮ್ಮೇಳಗಳೊಂದಿಗೆ ನಡೆಯುತ್ತದೆ. ಪ್ರದಕ್ಷಿಣೆಯ ವೇಳೆ ಗಣಪತಿ ಗುಡಿಯೆದುರು ಯಕ್ಷನಾಟ್ಯ ಸೇವೆ ಬಳಿಕ ಮೇಳದ ಪೆಟ್ಟಿಗೆ ಪರಿಕರಗಳ ಸಹಿತ ಚೌಕಿಗೆ ಆಗಮಿಸುತ್ತಾರೆ.
ಚೌಕಿ ಪೂಜೆ:
ಸರಸ್ವತೀ ಸದನದಲ್ಲಿ ರಾತ್ರಿ 8.30ಕ್ಕೆ ಆರು ಮೇಳಗಳ ಚೌಕಿಪೂಜೆ ಏಕಕಾಲದಲ್ಲಿ ನಡೆಯುವುದು ನೋಡುಗರಿಗೆ ಮಹಾದನಾಂದದ ಕ್ಷಣ. ಚೌಕಿಪೂಜೆ ಬಳಿಕ ಆರೂ ರಂಗಸ್ಥಳಗಳಲ್ಲಿ ದೇವರಪೂಜೆ ” ಪಾಂಡವಾಶ್ವಮೇಧ” ಪ್ರಸಂಗದ ಕಥಾಭಾಗ ಆರಂಭದವರೆಗೂ ಈ ವಿಜೃಂಭಣೆಯನ್ನು ಯಕ್ಷಪ್ರೇಮಿಗಳು ಅನುಭವಿಸಬಹುದು.
ಸ್ವರ್ಣ ಕಿರೀಟಧಾರಿಣಿಯಾಗಿ ಶೋಭಿಸಲಿರುವ ಶ್ರೀದೇವಿ:
ಎಲ್ಲಾ ಅರೂ ಮೇಳಗಳಿಗೆ ಈ ಬಾರಿ ನೂತನವಾಗಿ ಸ್ವರ್ಣಕಿರೀಟದ ಸಮರ್ಪಣೆ. ದೇವಿಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀದೇವಿ ಅದಕ್ಕೆ ಚಿನ್ನದ ಲೇಪನವನ್ನು ಲ್ಯಾಮಿನೇಶನ್ ಮಾಡಲಾಗಿದೆ. ಸೇವಾ ರೂಪದಲ್ಲಿ ಈ ಸೇವೆಯನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದು ಇಂದು ಭಕ್ತವೃಂದದವರು ಶ್ರೀ ದೇವರ ಸನ್ನಿಧಿಗೆ ಸಮರ್ಪಣೆಗೊಳ್ಳಲಿದೆ.
ನಿಯಮಗಳಲ್ಲಿ ಪರಿಷ್ಕರಣೆ:
ತಿರುಗಾಟದ ಸಂದರ್ಭ ರಂಗಸ್ಥಳ, ಚೌಕಿ, ದೇವಿ ಮಹಾತ್ಮೆಯ ಉಯ್ಯಾಲೆ ಮಂಟಪ, ಪೂಜೆ, ಊಟ-ಉಪಹಾರ, ಅಲಂಕಾರ ಮುಂತಾದುವುಗಳ ಬಗ್ಗೆ ನಿಯಮಗಳಲ್ಲಿ ಪರಿಷ್ಕರಣೆಯನ್ನು ಮಾಡಲಾಗಿದೆ. ಅಲ್ಲದೇ ರಂಗಸ್ಥಳ, ದೇವಿ ಮಹಾತ್ಮೆಯ ಮಂಟಪ, ಚೌಕಿ ಹಾಗೂ ರಂಗಸ್ಥಳದ ಮುಂಭಾಗಕ್ಕೆ ಸಂಬಂಧಿಸಿ ವಿದ್ಯುದೀಪ ಅಲಂಕಾರಗಳನ್ನು ನಿಗದಿತ ಸ್ಪಷ್ಟ ನಿರ್ದೇಶನವನ್ನು ಎಲ್ಲಾ ಸೇವಾಕರ್ತರಿಗೂ ಈಗಾಗಲೇ ನಿಡಲಾಗಿದೆ. ಈ ಎಲ್ಲಾ ನಿಯಮಗಳು ಹಿಂದೆಯೂ ಇತ್ತಾದರೂ ವಿಜೃಂಭಣೆ- ಆಡಂಬರದ ನಡುವೆ ಅವು ಮಾಯವಾಗಿತ್ತು. ಅಲ್ಲದೇ ಪ್ರಸಂಗ ಪ್ರಸ್ತುತಿಯ ಸಮಯದ ಚೌಕಟನ್ನು ಕಥಾಭಾಗಕ್ಕೆ ಅಭಾಸವಾಗದ ರೀತಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಮೇಳದ ಮೂಲಗಳು ತಿಳಿಸಿವೆ.
ದೇವಳದ ಅನುವಂಶಿಕ ಅರ್ಚಕ ಹಾಗೂ ಮೋಕ್ತೇಸರ ವಾಸುದೇವ ಅಸ್ರಣ್ಣ, ಅನುವಂಶಿಕ ಮೋಕ್ತೇಸರ ಡಾ| ಕೆ. ರವೀಂದ್ರನಾಥ ಪೂಂಜಾ, ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಅಸ್ರಣ್ಣ ಬಂಧುಗಳು, ಸೇವಾಕರ್ತರುಗಳು, ಹಾಗೂ ಸಮಸ್ತರ ಉಪಸ್ಥಿತಿಯಲ್ಲಿ ಮೇಳ ಹೊರಡುವ ಹಾಗೂ ಸೇವೆಯಾಟದ ಪ್ರಕ್ರಿಯೆಗಳು ನಡೆಯಲಿವೆ.
ವಾಹನ ಸಂಚಾರ ಬದಲಾವಣೆ:
ದೇವಳದ ರಥಬೀದಿಯಲ್ಲಿ ಆರು ರಂಗಸ್ಥಳಗಳಲ್ಲಿ ಸೇವೆಯಾಟ ಇರುವುದರಿಂದ ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನವರೆಗೆ ರಥಬೀದಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

