ಕನ್ನಡಿ ಬಾಳ ಮುನ್ನುಡಿ…
“ಮುಖ” ಅಂತರಾಳದ ಅಂತರ್ ಮಿರರ್. ಮನಸ್ಸಿನ ಮಾತು ಭಾವನೆಯಲ್ಲಿ ಸೋತು ಮುಖದಲ್ಲಿ ಪ್ರಕಟವಾಗುತ್ತದೆ. ಹಲಸು ಹಣ್ಣಾದುದನ್ನು ಮುಚ್ಚಿಡಲು ಸಾಧ್ಯವಿಲ್ಲ. ಅಂತೆಯೇ ಮನಸ್ಸಿನ ಭಾವನೆ ಮುಖದಲ್ಲಿ ವ್ಯಕ್ತಪಡಿಸದೆ ಇರಲೂ ಸಾಧ್ಯವಿಲ್ಲ.
ಕನ್ನಡಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಮುಖವನ್ನು “ಮನಸ್ಸಿನ ಕನ್ನಡಿ” ಎನ್ನುತ್ತಾರೆ. ಆದರೆ ಆ ಮುಖವನ್ನು ನೋಡಲು ಕನ್ನಡಿ ಬೇಕೇ ಬೇಕು. ಕನ್ನಡಿಯು ಈಗ ನಮ್ಮ ಬಾಳಿನಲ್ಲಿ ಹಾಸುಹೊಕ್ಕಾಗಿದೆ. ಜೀವನದ ಅವಿಭಾಜ್ಯ ಅಂಗದಂತಾಗಿದೆ. ಕನ್ನಡಿ ಇಲ್ಲದ ಜೀವನವನ್ನೂ ಊಹಿಸಲು ಸಾಧ್ಯವಿಲ್ಲ.
ಬೆಳಗ್ಗೆ ಮನೆಯಿಂದ ಹೊರಡುವ ಮೊದಲು ನಾವು ಹೇಗೆ ಕಾಣಿಸ್ತೇವೆ, ಹಾಕಿರುವ ಬಟ್ಟೆ ಹೇಗಿದೆ, ಮುಖ ಹೇಗೆ ಕಾಣಿಸುತ್ತದೆ, ತಲೆ ಕೂದಲು ಸರಿಯಾಗಿ ಇದೆಯೋ ಹೀಗೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸುವುದು ಜೀವವಿಲ್ಲದ ಕನ್ನಡಿ. ಯಾವ ಪ್ರತಿಫಲವೂ ಇಲ್ಲದೇ ನಿಸ್ವಾರ್ಥ ಸೇವೆ ಮಾಡುವ ಉತ್ತಮ ಗೆಳೆಯ ಕನ್ನಡಿ.
ಹೌದು! ಕನ್ನಡಿ ಒಬ್ಬ ಆತ್ಮೀಯ ಗೆಳೆಯನಿದ್ದಂತೆ. ಹೇಗೆಂದರೆ ಅದು ನಮ್ಮ ನೋವಿನಲ್ಲೂ- ನಲಿವಿನಲ್ಲೂ ನಮಗೆ ಬೇಕಾದಂತೆಯೇ ಇರುತ್ತದೆ. ನಾವು ದುಃಖದಲ್ಲಿ ಇದ್ದಾಗ ದುಃಖವನ್ನೂ, ಖುಷಿಯಲ್ಲಿ ಇದ್ದಾಗ ಖುಷಿಯನ್ನು ಕನ್ನಡಿ ಪ್ರತಿಬಿಂಬಿಸುತ್ತದೆ. ಹೊರಗೊಂದು ಒಳಗೊಂದು ಅನ್ನುವ ಮನುಜ ಬುದ್ಧಿ ಕನ್ನಡಿಗಿಲ್ಲ. ಈಗೀಗ ಕನ್ನಡಿಗಳಲ್ಲಿ ವಿಧ ವಿಧದ ಚಿತ್ತಾರಗಳನ್ನು ಕಾಣಬಹುದು. ವಿವಿಧ ಗಾತ್ರದ ಕನ್ನಡಿಗಳು ಈಗ ಸಿಗುತ್ತವೆ. ಕನ್ನಡಿಯೇ ಇಲ್ಲದ ಮನೆ ಬಹುಶಃ ಎಲ್ಲೂ ಇರದು. ಅಂತೆಯೇ ಎಲ್ಲಾ ವಾಹನಗಳಿಗೂ ಕನ್ನಡಿ ಅಗತ್ಯ. “ಸೈಡ್ ಮಿರರ್ “ಇರದೆ ಹೋದರೆ ಖಂಡಿತ ವಾಹನಗಳು ಅಪಘಾತಕ್ಕೆ ಸಿಲುಕುತ್ತವೆ.
“ಮೈಕ್ ಮುಂದೆ ನಿಂತ ಸಾಹಿತಿ, ಕನ್ನಡಿ ಮುಂದೆ ನಿಂತ ಯುವತಿ ಇವರಿಬ್ಬರಿಗೂ ಸಮಯದ ಪರಿವೇ ಇರುವುದಿಲ್ಲ ಎಂದು ಹಲವರು ಹೇಳುವುದುಂಟು”. “ಹುಡುಗಿಯರಿಗೂ ಕನ್ನಡಿಗೂ ಜನುಮ ಜನುಮದ ಅನುಬಂಧ ಅದು ಎಂದಿಗೂ ಮುರಿಯದ ಸಂಬಂಧ”. ಆದರೆ ನಮ್ಮ ಈಗಿನ ಯುವಕರು ಏನೂ ಕಡಿಮೆಯಿಲ್ಲ. ಎಲ್ಲೇ ಕನ್ನಡಿ ಕಂಡರೂ ಜೇಬಿನಲ್ಲಿರುವ ಬಾಚಣಿಗೆ ಕೈಯಲ್ಲಿರುತ್ತದೆ. ಕನ್ನಡಿಗೆ ಯುವಕ ಯುವತಿ ಎನ್ನುವ ತಾರತಮ್ಯ ಇಲ್ಲ. ಸಂಪೂರ್ಣ ಸಮಾನತೆ..!
-ಹರ್ಷಿತಾ.ಎಚ್