ಮನುಷ್ಯನು ಕೋಪಿಷ್ಟನಾದಾಗ ಅವನ ಜ್ಞಾನವೆಲ್ಲವೂ ಶೂನ್ಯವಾಗಿರುವುದು…
ಮನುಷ್ಯನು ಕೋಪಿಷ್ಟನಾದಾಗ ಅವನ ಜ್ಞಾನವೆಲ್ಲವೂ ಶೂನ್ಯವಾಗಿರುವುದು. ಎಷ್ಟೇ ಜ್ಞಾನ ಇದ್ದರೂ ಕೋಪವು ಜ್ಞಾನವನ್ನು ಮರೆಮಾಡುತ್ತದೆ. ಕೋಪ ಎಂಬುದು ಅಗ್ನಿಯ ಹಾಗೆ . ಈ ಅಗ್ನಿಯಲ್ಲಿ ಜ್ಞಾನ, ಮಮತೆ ವಾತ್ಸಲ್ಯ, ಪ್ರೀತಿಗಳು, ಸುಟ್ಟು ಬೂದಿಯಾಗುತ್ತವೆ. ಕೋಪ ಮನುಷ್ಯನ ಜೀವನನ್ನೇ ಹಾಳು ಮಾಡುತ್ತದೆ.
ಬಸವಣ್ಣನವರು “ ಕೋಪ ಮಜ್ಜನ ಕೆರೆದರೆ ರಕ್ತಧಾರೆ” ಕೋಪಿಷ್ಟ ಮನುಷ್ಯ ದೇವರ ಮೇಲೆ ನೀರು ಎರೆದರೆ ರಕ್ತ ಎಂಬಂತೆ ಹೇಳುತ್ತಾರೆ. ತನುವಿನ ಕೋಪ ಎಂದರೆ ಒಮ್ಮಿಂದೊಮ್ಮೆಲೆ ಬರುವ ಕೋಪದಿಂದ ಆ ಮನುಷ್ಯನ ಹಿರಿಯತನ ನಾಶವಾಗುತ್ತದೆ. “ಮನದ ಕೋಪ ತನ್ನ ಅರಿವಿನ ಕೇಡು “ ಎಂದು ಬಸವಣ್ಣನವರು ಹೇಳಿದ್ದಾರೆ.
ಕೋಪದಲ್ಲಿ ಕೊಯ್ದ ಮೂಗು ಮತ್ತೇ ಬಂದೀತೆ? ಎಂಬಂತೆ ಮನುಷ್ಯನಿಗೆ ಕೋಪ ಬಂದರೆ ರಾಕ್ಷಸನಂತೆ ವರ್ತಿಸುತ್ತಾನೆ. ಕೋಪದ ಕೈಯಲ್ಲಿ ನಾವು ಬೀಳಬಾರದು. ಮನಸ್ಸಿನಲ್ಲಿ ಕೋಪವೇ ತುಂಬಿರುವುದರಿಂದ ಅಲ್ಲಿ ಅರಿವಿಗೆ ಸ್ಥಾನ ಇರುವುದಿಲ್ಲ. ಆಗ ಪಶುವಿನಂತೆ ವರ್ತಿಸುವ ಸಂದರ್ಭಗಳು ಹೆಚ್ಚು. ಕೋಪ ಎಂಬುದು ಹತ್ತಿ ಉರಿಯುವ ಬೆಂಕಿಯಂತೆ. ಅದು ನಮ್ಮನ್ನು ಸುಟ್ಟು ಬಿಡುತ್ತದೆ. ಅದು ತುಂಬಲಾರದ ಹಾನಿಯನ್ನುಂಟು ಮಾಡುತ್ತದೆ. ಕೋಪ ಬಂದರೆ ಅದನ್ನು ನಿಯಂತ್ರಣ ಮಾಡಬೇಕು. ಅಕ್ಕಮಹಾದೇವಿಯವರು ಹೇಳಿದಂತೆ ಮನದಲ್ಲಿ ಕೋಪವ ತಾಳದೇ ಸಮಾಧಾನಿಯಾಗಿರಬೇಕು.