ಎಲ್ಲಾ ಪ್ರಶ್ನೆಗಳಿಗೂ ಸಾವೇ ಉತ್ತರವಲ್ಲ..
“ಸಾಕಪ್ಪಾ..ಸಾಕು ನನ್ನ ಜೀವನವೇ ಸಾಕು” ಅಂತ ಹೇಳುವವರು ಈ ಜಗತ್ತಿನಲ್ಲಿ ಅದೆಷ್ಟೋ ಮಂದಿ. ಸೃಷ್ಟಿಕರ್ತನಾದ ದೇವರು ಸೃಷ್ಟಿಗೆ ಕಾರಣವಾದರೆ, ತಾಯಿ ನಮ್ಮ ಸುಂದರವಾದ ಬದುಕಿಗೆ ಜೀವ ಕೊಡುತ್ತಾಳೆ. ಆದರೆ ಇಂದಿನ ಯುವಪೀಳಿಗೆಯಲ್ಲಿ ತಮ್ಮ ಜೀವನವೇ ಬಹು ದೊಡ್ಡ ಹೊರೆ ಎಂದು ಸುಂದರವಾದ ಜೀವನವನ್ನೇ ಕಳೆದುಕೊಳ್ಳಲು ಬಯಸುತ್ತಾರೆ.
ಈ ಪ್ರಪಂಚದಲ್ಲಿ “ಭಾಗ್ಯಶಾಲಿಗಳು ನಾವೇ” ಅಂತ ಬಾಳುವವರು ತುಂಬಾನೇ ಕಡಿಮೆ. ದೇವರು ಹೊಸ ಜನ್ಮವನ್ನು ಕೊಟ್ಟಿದ್ದಾನೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಬಾಳಬೇಕು ಎಂದೆನ್ನುವವರು ಬಹುಶಃ ಈ ಭೂಮಿಯಲ್ಲಿ ಅತೀ ಕಡಿಮೆ. ಬಡವ-ಶ್ರೀಮಂತ, ಭೇದ-ಭಾವ, ಮೇಲು-ಕೀಳು, ಹಿರಿಯ-ಕಿರಿಯ ಎನ್ನದೇ ಒಂದಲ್ಲ ಒಂದು ರೀತಿಯಲ್ಲಿ ಸುಖ ಅನ್ನೋದು ಹೇಗೆ ಸಿಗುತ್ತದೆಯೋ ಹಾಗೆಯೇ ದುಃಖವೂ ಬರುತ್ತೆ.
ಮನುಷ್ಯನಿಗೆ ಆಸೆ ಅನ್ನೋದು ಕಡಲ ಅಲೆಯಂತೆ ಬಂದು ಹೋಗುತ್ತದೆ. ಎಷ್ಟೇ ನಮಗೆ ಸುಖ ಸಿಕ್ಕರೂ ಅದರಲ್ಲೂ ಅತೃಪ್ತಿಯನ್ನೂ ಹುಡುಕುವವರು ಇದ್ದಾರೆ. ಎಷ್ಟೇ ಆಸೆ ಈಡೇರುತ್ತಾ ಹೋದರೂ ಹೊಸ ಹೊಸ ಬಯಕೆಗಳು ಮನಸ್ಸಿನಾಳದಲ್ಲಿ ಪುನಃ ಪುನಃ ಹುಟ್ಟುತ್ತನೇ ಇರುತ್ತದೆ. ಇದರಿಂದ ಒಳಿತಿಗಿಂತ ಕೆಡುಕಾಗುವುದು ನಿಜ.
ಜೀವನ ಬಾಳಿನುದ್ದಕ್ಕೂ ನಡೆಯುವ ಒಂದು ಯುದ್ಧ. ನಾವು ನಮಗೆ ಎದುರಾಗುವ ಅನೇಕ ಸನ್ನಿವೇಶಗಳನ್ನು ದಾಟಿ ಬರಬೇಕು. ಇದರಲ್ಲಿ ಸೋಲು ಗೆಲುವು ಕಟ್ಟಿಟ್ಟ ಬುತ್ತಿ. ಗೆಲುವು ಸಿಕ್ಕಾಗ ನಾವು ಎಷ್ಟು ಆನಂದ ಪಡೆಯುತ್ತವೆಯೋ, ಅದೇ ರೀತಿ ಸೋಲನ್ನು ಕೂಡಾ ಸ್ವೀಕರಿಸಿ, ಸೋಲು ನಮಗೆ ಪಾಠ ಕಲಿಸುತ್ತದೆ. ಇದರಿಂದ ಇನ್ನಷ್ಟೂ ಗೆಲುವನ್ನು ಸಾಧಿಸಲು ಸಾಧ್ಯವಾಗಬಹುದು. ಪ್ರಪಂಚದಲ್ಲಿ ಒಬ್ಬರಿಗೆ ಮಾತ್ರ ಕಷ್ಟ ಮೀಸಲು ಅಂತ ಬರೆದಿಲ್ಲ ಬಿಡಿ, ಪ್ರತಿಯೊಂದು ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಕಷ್ಟ ಸಿಗುತ್ತೆ. ಆದರೆ ಅದಕ್ಕೆ ಅಂಜದೆ ಅದನ್ನು ಎದುರಿಸಿ ನಿಲ್ಲುವವನೇ ನಿಜವಾದ ಮನುಷ್ಯ. ಅವನೇ ಅದೃಷ್ಟವಂತ ಅಂದರೂ ತಪ್ಪಾಗಲಾರದು. ಏಕೆಂದರೆ ಮುಂದೆ ಸಿಗುವ ಎಲ್ಲಾ ಅವಕಾಶಗಳು ಅವನಿಗೆ ಲಭಿಸುತ್ತವೆ.
ಎಲ್ಲಾ ಸನ್ನಿವೇಶಗಳು ನಮ್ಮ ಹೊಸ ಜೀವನವನ್ನು ರೂಪುಗೊಳಿಸುತ್ತದೆ ಮತ್ತು ಸರಿಯಾದ ದಾರಿಯಲ್ಲಿ ನಡೆಯಲು ಕಾರಣವಾಗುತ್ತದೆ. ಆದ್ದರಿಂದ ರೂಪು ಕೊಡುವವರು ನಾವಾಗಬೇಕು ಹೊರತು, ಅದನ್ನು ಪೂರ್ತಿಯಾಗಿ ಅಳಿಸಿ ಹಾಕುವುದಿಲ್ಲ. ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಇದನ್ನು ತಿಳಿದು ನಮ್ಮ ಜೀವನದಲ್ಲಿ ಏನೇ ಬಂದರೂ ಅದನ್ನು ಎದುರಿಸಿ, ನಗು ನಗುತ್ತಾ ಬಾಳೋಣ. ತುಟಿ-ಬಾಯಿ ಎರಡೂ ನಮ್ಮದೇ ಹಾಗಾದ್ರೆ ನಗುವುದಕ್ಕೆ ಏನು ಸಮಸ್ಯೆ ಅಂತ ಕೆಲವರು ಹೇಳ್ತಾರೆ. ಆದರೆ ಮನಸ್ಸು ಸರಿಯಿಲ್ಲ ಅಂದ್ರೆ ನಗುವುದು ಹೇಗೆ ಅಲ್ವಾ..? ಮನಸ್ಸು ಕೂಡಾ ನಮ್ಮದೇ ತಾನೇ ಆದ್ದರಿಂದ ಮನಸ್ಸಲ್ಲಿ ಯಾವಾಗಲೂ ಒಳ್ಳೆಯದನ್ನು ಆಲೋಚಿಸಿ ಸಂತೋಷದಿಂದ ಬಾಳಲು ಮುಂದಾಗೋಣ.
– ನಿಧಿಶಾ.ಎನ್ ಶೆಟ್ಟಿ