

- ಅವುಗಳನ್ನು ಕೈಯಿಂದಲೇ ಸಮಾನವಾಗಿ ಮಿಶ್ರಣ ಮಾಡಬೇಕು






ಮುಂಗಾರು ಆರಂಭಗೊಂಡಂತೆ ರೈತರು ಬಿತ್ತನೆ ಮಾಡುವಲ್ಲಿ ಬ್ಯುಸಿಯಾಗಿರುತ್ತಾರೆ. ಇಂದು ಹಲವಾರು ರೈತರು ತನ್ನ ಸಾಂಪ್ರದಾಯಿಕ ಬಿತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿ ವೈಜ್ಞಾನಿಕ ರೀತಿಯಲ್ಲಿ ಬೆಳೆಸಿ ಉತ್ತಮ ಫಸಲು ಪಡೆಯುತ್ತಾರೆ. ಒಂದು ಕಾಲದಲಲಿ ಬತ್ತಕೃಷಿ ಎಂದು ಮುಖ ಬಾಡಿಸುತ್ತಿದ್ದ ಮಂದಿ ಕೂಡಾ ಇಂದು ಬತ್ತದ ಕೃಷಿಯತ್ತ ಮುಖ ವಾಲಿಸುತ್ತಿದ್ದಾರೆ. ಕಡಿಮೆ ನೀರನ್ನೇ ಉಪಯೋಗಿಸಿ ಉತ್ತಮ ಫಸಲನ್ನು ಪಡೆಯಲು ಇಂದು ಸಾಧ್ಯವಾಗುತ್ತದೆ.
ಬತ್ತ ಕೃಷಿಯಲ್ಲಿ ರೈತರಿಗೆ ಮುಖ್ಯವಾಗಿ ಸಮಸ್ಯೆ ಕಾಡುವುದು ಬಿತ್ತನೆ ಕಾರ್ಯದಲ್ಲಿ. ಬಿತ್ತಿದಂತೆ ಬೆಳೆ ಎಂಬಂತೆ ಬಿತ್ತನೆ ಕಾರ್ಯ ಚೆನ್ನಾಗಿದ್ದರೆ ಮುಂದೆ ಉತ್ತಮ ಫಸಲನ್ನು ನಿರೀಕ್ಷಿಸಬಹುದು. ಸ್ವಲ್ಪ ಹಿಂದೆ ಬಿತ್ತನೆ ಕಾರ್ಯ ಮಾಡುತ್ತಿದ್ದ ಕ್ರಮ ಹೇಗಿತ್ತೆಂದರೆ ಒಂದು ಗದ್ದೆಯಲ್ಲೇ ಮಡಿ ತಯಾರಿಸಿ ಅದರಲ್ಲಿ ಬಿತ್ತುತ್ತಿದ್ದರು. ಇದನ್ನು ಉಳುಮೆ ಮಾಡಲೆಂದೇ ಸಾಧಾರಣ ಖಚರ್ಾಗುತ್ತಿತ್ತು. ಅಲ್ಲದೆ ಇದರ ನಿರ್ವಹಣೆ ಕೂಡಾ ಅತಿ ಕಷ್ಟ. ಜೋರು ಮಳೆ ಬಂದರೆ ಬೀಜಗಳೆಲ್ಲಾ ನೀರುಪಾಲಾಗುತ್ತಿತ್ತು. ಅಲ್ಲದೆ ಗದ್ದೆಗ ಹಾಕಿದ ಗೊಬ್ಬರ ಕೂಡಾ ನಷ್ಟಹೊಂದುತ್ತಿತ್ತು. ಒಟ್ಟಿನಲ್ಲಿ ಅವೈಜ್ಞಾನಿಕತೆಯಿಂದ ಕೂಡಿದ ಈ ಕೃಷಿ ವಿಧಾನದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಇದನ್ನೆಲ್ಲಾ ಮನಗಂಡು ಇತ್ತೀಚೆಗೆ ಡಾಪೋಗ್ ವಿಧಾನದ ಮೂಲಕ ಸುಲಭವಾಗಿ ಬಿತ್ತನೆ ಕಾರ್ಯ ಮಾಡಬಹುದು. ಈ ವಿಧಾನದಿಂದ ಮಾಡಿದ ಬತ್ತದ ಗಿಡ(ನೇಜಿ) ಆರೋಗ್ಯಪೂರ್ಣವಾಗಿರುತ್ತದೆ ಕೂಡಾ.
ಏನದು ಡಾಪೋಗ್ ವಿಧಾನ?
ನಮ್ಮ ಮನೆಯ ಮಹಡಿಯ ಮೇಲೆ, ಅಂಗಳದ ಮೇಲೆ ಸಾಕಷ್ಟು ಜಾಗವಿರುತ್ತದೆ. ಇದರ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸಿ ಕಂಪೋಸ್ಟ್ ಗೊಬ್ಬರ ಹಾಗೂ ಬೂದಿಯನ್ನು ಉಪಯೋಗಿಸಿ ಸಸಿಮಡಿ ತಯಾರಿಸಬಹುದು. ಈ ಜಾಗಕ್ಕೆ ಭಾಗಶಃ ಬಿಸಿಲು ಬೀಳುತ್ತಿರಬೇಕು. ಅಲ್ಲದೆ ಜಾಗ ಸ್ವಲ್ಪ ಗಟ್ಟಿಯಾಗಿರಬೇಕು.
ಸಸಿಮಡಿ ತಯಾರಿಸುವುದು ಹೇಗೆ?
ಅಂದಾಜ ಒಂದು ಮೀಟರ್ ಅಗಲ ಹಾಗೂ 10 ಸೆಂ.ಮೀ ಎತ್ತರದ ಒಣ ಮಡಿ ತಯಾರಿಸಿ, ಮೇಲೆಮೈಯನ್ನು ಸಮತಟ್ಟುಗೊಳಿಸಿ ಅದರ ಮೇಲೆ ತೆಳು ಪ್ಲಾಸ್ಟಿಕ್ ಹಾಳೆಯನ್ನು ಹರಡಬೇಕು. ಪ್ಲಾಸ್ಟಿಕ್ ಹಾಳೆಯ ಮೇಲೆ ಸುಮಾರು ಎರಡು ಸೆಂ.ಮೀ ದಪ್ಪ ಬರುವಂತೆ ಹುಡಿಯಾದ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ (ಬೇಕಿದ್ದಲ್ಲಿ ಸ್ವಲ ಮಣ್ಣು ಕೂಡ ಬೆರೆಸಬಹುದು) ಮತ್ತು ಬೂದಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಚೆನ್ನಾಗಿ ಹರಡಬೇಕು. ಬಳಿಕ ಇದರ ಮೇಲೆ ತೆಳುವಾಗಿ ಬೂದಿಯನ್ನು ಚಿಮುಕಿಸಬೇಕು(ಬೂದಿಯಿಂದ ಬೀಜಕೊರೆಯುವ ಹುಳುಗಳಿಂದ ರಕ್ಷಣೆ ಪಡೆಯಬಹುದು)
ಬಳಿಕ ಬತ್ತದ ಬೀಜವನ್ನು ಈ ಮಿಶ್ರಣದ ಮೇಲೆ ಪ್ರತಿ ಚ.ಕಿ.ಮೀ.ಗೆ ಒಂದು ಕಿ.ಗ್ರಾಂ ಬೀಜ ಬರುವಂತೆ ಒಂದೇ ಸಮಾನಾಗಿ ಬಿತ್ತಿ ಬೀಜಗಳನ್ನು ಕೈಯಿಂದ ಮೃದುವಗಿ ತಟ್ಟಬೇಕು. ಜಾಸ್ತಿ ಬಿಸಿಲು ಹಾಗೂ ಹಕ್ಕಿಗಳ ತೊಂದರೆ ತಡೆಯಲು ಇವುಗಳ ಮೇಲೆ ತೆಂಗಿನ ಗರಿಯಿಂದ ಹೊದಿಕೆ ಮಾಡಿ ಮುಚ್ಚಬೇಕು.
ದಿನಾಲೂ ಮಳೆ ಬರುವಂತಿದ್ದರೆ ನೀರು ಚಿಮುಕಿಸುವ ಅಗತ್ಯವಿಲ್ಲ. ಆದರೆ ಮಳೆ ಬಾರದೇ ಇದ್ದರೆ ದಿನಂಪ್ರತಿ ಎರಡು ಮೂರು ಬಾರಿ ತಪ್ಪದೆ ತೆಳುವಾಗಿ ನೀರು ಚಿಮುಕಿಸುತ್ತಲೇ ಇರಬೇಕು. ಮೂರು ಅಥವಾ ನಾಲ್ಕು ದಿನದ ನಂತರ ಮೇಲಿನ ಹೊದಿಕೆಯನ್ನು ತೆಗೆಯಬಹುದು. ಈ ವಿಧಾನದಲ್ಲಿ 18ರಿಂದ 20 ದಿನಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗಿರುತ್ತದೆ. ನಾಟಿಯ ಸಮಯದಲ್ಲಿ ಸಸಿಮಡಿಯನ್ನು ಸುಲಭವಾಗಿ ಸಾಗಿಸಬಹುದು.
ಈ ವಿಧಾನದಿಂದ ಕಡಿಮೆ ಪ್ರದೇಶ ಹಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಸಸಿಗಳನ್ನು ಪಡೆಯಬಹುದು. ಕಳೆಗಳನ್ನು ಕೀಳಬೇಕಾಗಿರುವುದಿಲ್ಲ. ಸಸಿಗಳ ಬೇರಿನಲ್ಲಿ ಅಂಟಿರುವ ಗೊಬ್ಬರ ಸಸಿಗಳಿಗೆ ಉತ್ತಮ ಫಲಿತಾಂಶ ನೀಡುತ್ತದೆ. ಅಲ್ಲದೆ ಸಾಂಪ್ರದಾಯಿಕ ವಿಧಾನದಲ್ಲಿ ಬಳಕಯಾಗುವ ಬೀಜಕ್ಕಿಂತ ಈ ವಿಧಾನದಲ್ಲಿ ಕಡಿಮೆ ಬೀಜಗಳು ಬಳಕೆಯಾಗುತ್ತದೆ.

