ನೀರಿನಲ್ಲೇ ಸಿಡಿದಿತ್ತಾ ಗ್ಯಾಸ್ ಟ್ಯಾಂಕರ್?
ಶಿರೂರು: ಶಿರೂರು ಗುಡ್ಡ ಕುಸಿತ ಸಂದರ್ಭ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಎರಡು ಟ್ಯಾಂಕರ್‌ಗಳ ಗ್ಯಾಸ್ ಲೀಕೇಜ್ ಮಾಡಲಾಗಿದೆ. ಆದರೆ ಇನ್ನೊಂದು ನೀರಿನಲ್ಲೇ ಸ್ಫೋಟಿಸಿರಬಹುದು ಎನ್ನುವ ಅನುಮಾನ ಸ್ಥಳೀಯ ಉಳವರೆ ನಿವಾಸಿಗಳ ಮಾತಿನಿಂದ ವ್ಯಕ್ತವಾಗುತ್ತಿದೆ.
ನದಿಗೆ ಗುಡ್ಡ ಉರುಳಿ ಕೊಂಚ ಹೊತ್ತಿನಲ್ಲೇ ಬಾಂಬ್ ಸ್ಫೋಟಿಸಿದಂತೆ ಶಬ್ದ ಕೇಳಿದ್ದು, ನೀರು ಆಕಾಶದೆತ್ತರಕ್ಕೆ ಚಿಮ್ಮಿತು. ಇದಾದ ಸ್ವಲ್ಪ ಹೊತ್ತಿನಲ್ಲೇ ಅಲ್ಲಿದ್ದ ನಾಲ್ಕೈದು ಮನೆಗಳು ನೀರಲ್ಲಿ ಗುರುತೇ ಸಿಗದಂತೆ ಕೊಚ್ಚಿಹೋಯಿತು ಹಲವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಟ್ಯಾಂಕರ್ ಸ್ಫೋಟದ ವಿಷಯವನ್ನು ಜಿಲ್ಲಾಡಳಿತ ಮುಚ್ಚಿಟ್ಟಿದೆ ಎನ್ನುವ ಆರೋಪ ಕೇಳಿಬಂದಿದೆ.
ಅರ್ಜುನಿಗಾಗಿ ಒಂದಾದ ಕೇರಳ
ನಾಪತ್ತೆಯಾದ ಲಾರಿ ಡ್ರೈವರ್ ಅರ್ಜುನನ ಮೊಬೈಲ್ ಕೆಲವು ದಿನಗಳ ಕಾಲ ರಿಂಗಣಿಸುತ್ತಿತ್ತು ಎನ್ನುವುದು ಇಡೀ ಕೇರಳದಲ್ಲಿ ತಲ್ಲಣ ಸೃಷ್ಟಿಸಿದೆ. ಕೇರಳದ ಕೋಝಿಕ್ಕೊಡೆ ನಿವಾಸಿಯಾಗಿರುವ ಅರ್ಜುನ ಶಿರೂರ್ ಗುಡ್ಡ ಕುಸಿದ ಸಂದರ್ಭ ಮರದ ಲಾರಿ ಚಲಾಯಿಸುತ್ತಿದ್ದರು. ಇದುವರೆಗೆ ಅರ್ಜುನನ ಮೃತದೇಹವಾಗಲೀ, ಲಾರಿಯಾಗಲೀ, ಮರದ ಅವಶೇಷವಾಗಲೀ ಸಿಗಲಿಲ್ಲ.
ಅರ್ಜುನ ನಾಪತ್ತೆಯಾದ ಕೆಲವು ದಿನಗಳ ಕಾಲ ಮೊಬೈಲ್ ರಿಂಗಣಿಸುತ್ತಿತ್ತು. ಇದೀಗ ಸ್ವಿಚ್ಡ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಇಡೀ ಕೇರಳ ಜಾತಿ,ಮತ, ಬೇಧವೆನ್ನದೆ ಸುರಕ್ಷಿತವಾಗಿ ಪತ್ತೆ ಯಾಗುವಂತೆ ಪ್ರಾರ್ಥನೆಯಲ್ಲಿ ತೊಡಗಿದೆ. ಇಡೀ ಕೇರಳದ ಮಾಧ್ಯಮಗಳು ಶಿರೂರಿನಲ್ಲಿ ಬೀಡುಬಿಟ್ಟಿದೆ. ನದಿಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಲು ಎನ್‌ಡಿಆರ್‌ಎಫ್ ಡ್ರೆಜ್ಜಿಂಗ್ ಯಂತ್ರಗಳನ್ನು ಬಳಸಿದೆ. ಕೇರಳದ ಮಂಜೇಶ್ವರ ಎಂಎಲ್ಎ ಎಕೆ ಆಶ್ರಫ್, ಎಂಎಲ್ಎ ಸಚಿನ್, ಸ್ಥಳೀಯ ಸಮಾಜ ಸೇವಕರು ವಿಠಲ್ ನಾಯಕ್, ಇಬ್ರಾಹಿಂ ಕಲ್ಲೂರು ಕಳೆದ ಹಲವು ದಿನಗಳಿಂದ ಬೀಡುಬಿಟ್ಟಿದ್ದಾರೆ.
ಅಘಾತ ಸ್ಥಳಕ್ಕೆ ಯಾರನ್ನೂ ಪೊಲೀಸರು ಕೊಡಲು ಅವಕಾಶ ನೀಡಿಲ್ಲ. ಅಲ್ಲದೆ ಮೃತದೇಹಗಳ ಶೋಧಕ್ಕಾಗಿ ಆಧುನಿಕ ತಂತ್ರಜ್ಞಾನವನ್ನೂ ಬಳಸುತ್ತಿಲ್ಲ ಎಂದು ಆರೋಪಿಸುತ್ತಿರುವ ಕೇರಳ ಅರ್ಜುನನ ಶೋಧಕ್ಕೆ ತಮಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಐಆರ್‌ಬಿ ಸಂಸ್ಥೆ ಅವೈಜ್ಞಾನಿಕವಾಗಿ ರಸ್ತೆ ಕೊರೆದಿರುವುದೇ ದುರಂತಕ್ಕೆ ಕಾರಣವಾಗಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.
ಮೀನುಗಾರರಿಗೆ ಮಿಡಿವ ಹೃದಯಗಳೇ ಇಲ್ಲ
ಉಳವರೆ ಗ್ರಾಮದ ಪಕ್ಕದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಇಲ್ಲಿಮ ನಿವಾಸಿಗಳ ಮನೆ ಸಂಪೂರ್ಣ ಕೊಚ್ಚಿಹೋಗಿದೆ. ಅಲ್ಲೀಗ ಕೇವಲ ಅವಶೇಷಗಳಷ್ಟೇ ಇದ್ದು ಇನ್ನೂ ಮೂರ್ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆನ್ನವ ಮಾಹಿತಿ ಸ್ಥಳೀಯರು ನೀಡಿದ್ದಾರೆ. ಉಳವರೆ ಸರ್ಕಾರಿ ಶಾಲೆಯಲ್ಲಿ ಆಶ್ರಯ
ನಿರಾಶ್ರಿತರಿಗೆ ಉಳವರೆ ಸರ್ಕಾರಿ ಶಾಲೆಯಲ್ಲಿ ಆಶ್ರಯ ನೀಡಲಾಗಿದ್ದು ಬಿಟ್ಟರೆ ಸ್ಥಳೀಯ ಜಿಲ್ಲಾಡಳಿತ, ಶಾಸಕ, ಸಂಸದ, ರಾಜ್ಯ ಸರ್ಕಾರ ಅಲ್ಲದೆ ರಾಜ್ಯದ ಮಾಧ್ಯಮಗಳು ಕೂಡಾ ಉಳವರೆ ಗ್ರಾಮದ ನಿವಾಸಿಗಳನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.