ತುಳುನಾಡಿನಲ್ಲಿ ವಿಶಿಷ್ಟ ಆಚರಣೆ ಈ ಆಟಿ ಕಳಂಜ, ಇದರ ಹಿಂದಿದೆ ವಿಶೇಷ ಕಾರಣ
ತುಳುನಾಡಿನ ಆಚಾರ, ವಿಚಾರ, ಸಂಸ್ಕೃತಿ ಸಂಪ್ರದಾಯವು ವಿಭಿನ್ನತೆಯಿಂದ ಕೂಡಿದೆ. ಇಲ್ಲಿನ ಒಂದೊಂದು ಆಚರಣೆಯ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹೀಗಾಗಿ ಈ ತುಳುವರ ವಿಶಿಷ್ಟ ಆಚರಣೆಯಲ್ಲಿ ಆಟಿ ಕಳಂಜೆ ಕೂಡ ಒಂದು. ಈ ಹಳ್ಳಿಯನ್ನು ದುಷ್ಟ ಶಕ್ತಿ ಪ್ರವೇಶ ಮಾಡದಂತೆ ತಡೆಯುವ ದೈವಿಕ ಶಕ್ತಿಯೂ ಈ ಆಟಿ ಕಳಂಜನಿಗೆ ಇದೆ ಎನ್ನುವುದು ತುಳುವರ ನಂಬಿಕೆಯಾಗಿದೆ.
ಆಟಿ ತಿಂಗಳ ಪ್ರಕೃತಿ ವಿಕೊಪವನ್ನು ಸರಿದೂಗಿಸಲು ತುಳು ಜಾನಪದರು ಅನಾದಿ ಕಾಲದಿಂದಲೂ ಕಳಂಜ ಕುಣಿತವನ್ನು ಆಚರಿಸುತ್ತ ಬರುತ್ತಿದ್ದಾರೆ. ಈ ಆಷಾಢದಲ್ಲಿ ವಿಪರೀತವಾಗಿ ಸುರಿಯುವ ಮಳೆಯಿಂದಾಗಿ ರೋಗ ರುಜಿನಗಳು ಕಾಡುವುದೇ ಹೆಚ್ಚು. ಈ ಸಾಂಕ್ರಾಮಿಕ ಸೋಂಕುಗಳನ್ನು ಜನರು ಊರಿಗೆ ಮಾರಿ ಬಂತು ಎನ್ನುವ ಭಾವನೆ ತುಳುವರದ್ದು. ಈ ಮಾರಿಯನ್ನು ಕಳೆಯಲು ಈ ಆಟಿ ಕಳಂಜ ಬರುತ್ತಾನೆ. ಈ ಕುಣಿತವನ್ನು ಕೆಲವು ಭಾಗಗಳಲ್ಲಿ ಮಾತ್ರ ಕಾಣಬಹುದಾಗಿದೆ.
ಕೇರಳ ರಾಜ್ಯದಲ್ಲಿ ಆಟಿ ಕಳಂಜನಿಗೆ ಆಡುವೇಡನ್ ಎಂದೂ ಕರೆಯಲಾಗುತ್ತದೆ. ತುಳುನಾಡಿನ ದೈವಾರಾಧನೆಯಲ್ಲಿ ತೊಡಗಿಕೊಂಡಿರುವ ನಲಿಕೆ ಜನಾಂಗದವರು ಆಟಿ ಕಳಂಜ ವೇಷ ಹಾಕುತ್ತಾರೆ. ಆಟಿ ತಿಂಗಳಿನಲ್ಲಿ ಕೃಷಿ ಕೆಲಸವನ್ನೆಲ್ಲಾ ಮುಗಿಸಿಕೊಂಡ ಮನೆಯಲ್ಲೇ ಇರುವ ಸಮಯದಲ್ಲಿ ಮನೆ ಮನೆಗೆ ಬರುವವನೇ ಈ ಆಟಿ ಕಳಂಜ.
ಮಾರಿ ಕಳೆಯಲು ಮನೆಗೆ ಬರುವ ಕಳಂಜನಿಗೆ ಬೇಕಾದ ವಸ್ತುಗಳನ್ನು ಮನೆಮಂದಿ ದಾನ ಮಾಡಲಾಗುತ್ತದೆ. ಮನೆಗೆ ಬಂದ ಕಳಂಜನಿಗೆ ಅಕ್ಕಿ, ತೆಂಗಿನಕಾಯಿ, ಎಣ್ಣೆ ಮತ್ತು ಕಾರ, ಅರಿಶಿನ ನೀಡುವ ಸಂಪ್ರದಾಯವು ಇಂದಿಗೂ ಇದೆ. ಆಧುನಿಕತೆಯೂ ಸ್ಪರ್ಶವು ಜನರ ಬದುಕನ್ನು ಬೆಸೆದುಕೊಂಡಿದ್ದರೂ ಈ ಸಂಪ್ರದಾಯವನ್ನು ತುಳುವ ಜನರು ಇಂದಿಗೂ ಆಚರಿಸಿಕೊಂಡು ಬರುತ್ತಿರುವುದು ವಿಶೇಷ.