ಬಾಯಿಗೆ ಸಿಹಿ ದೇಹಕ್ಕೆ ತಂಪು ಮೆಂತ್ಯೆ ಗಂಜಿ, ರೆಸಿಪಿ ಮಾಡೋದು ಹೇಗೆ?
ತುಳುನಾಡಿನ ಆಚರಣೆ ವಿಚಾರ, ಸಂಸ್ಕೃತಿ, ಸಂಪ್ರದಾಯವು ಹೇಗೆ ವಿಭಿನ್ನವಾಗಿದೆಯೋ ಅದೇ ರೀತಿ ಇಲ್ಲಿನ ಆಹಾರ ಪದ್ಧತಿಯಲ್ಲಿ ವಿಶೇಷತೆಯನ್ನು ಕಾಣಬಹುದು. ಮಳೆಗಾಲದಲ್ಲಿ ವಿಶೇಷವಾದ ಅಡುಗೆ ಘಮವು ಕರಾವಳಿಗರ ಮನೆಯ ತುಂಬಾ ಹಬ್ಬುತ್ತದೆ. ಈ ಆಷಾಢ ಅಮಾವಾಸ್ಯೆಯಂದು ಕಷಾಯ ಕುಡಿದ ಬಳಿಕ ಸೇವಿಸುವ ಆಹಾರವೇ ಈ ಮೆಂತ್ಯೆ ಗಂಜಿ. ಅದಲ್ಲದೇ ಹೆಣ್ಣು ಋತುಮತಿಯದಾಗ, ಬಾಣಂತಿಯರಿಗೆ ಕೂಡ ಈ ತಿನಿಸನ್ನು ಮಾಡಿಕೊಡುತ್ತಾರೆ. ದೇಹವು ಉಷ್ಣವಾಗಿದ್ದರೆ ಈ ಆಹಾರವು ದೇಹವನ್ನು ತಂಪಾಗಿಸುತ್ತದೆ. ಹೀಗಾಗಿ ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳಿಂದ ಈ ಮೆಂತ್ಯೆ ಗಂಜಿಯನ್ನು ಮಾಡಿ ಸವಿಯಬಹುದು.
ಮೆಂತ್ಯೆ ಗಂಜಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಒಂದು ಕಪ್ ಅಕ್ಕಿ
- ಕಾಲು ಕಪ್ ಮೆಂತ್ಯೆ
- ಒಂದು ಕಪ್ ತುರಿದ ಬೆಲ್ಲ
- ತೆಂಗಿನಕಾಯಿ ತುರಿ
- ತುಪ್ಪ
- ರುಚಿಗೆ ತಕ್ಕಷ್ಟು ಉಪ್ಪು
ಮೆಂತ್ಯೆ ಗಂಜಿ ತಯಾರಿಸುವ ವಿಧಾನ
- ಮೊದಲಿಗೆ ಮೆಂತ್ಯ ಬೀಜಗಳನ್ನು ತೊಳೆದು ರಾತ್ರಿ ನೆನೆಸಿಡಬೇಕು.
- ಈ ನೆನೆಸಿದ ಮೆಂತ್ಯ ಬೀಜಗಳ ಜೊತೆಗೆ ಅಕ್ಕಿ ಮತ್ತು 5 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಎರಡರಿಂದ ಮೂರು ಸೀಟಿ ಬರುವವರೆಗೂ ಬೇಯಿಸಿಕೊಳ್ಳಬೇಕು.
- ತುರಿದ ತೆಂಗಿನಕಾಯಿಗೆ ನೀರನ್ನು ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿಕೊಂಡು ಹಾಲನ್ನು ತೆಗೆದು ಇಟ್ಟುಕೊಳ್ಳಬೇಕು.
- ಬೇಯಿಸಿದ ಅಕ್ಕಿ ಮತ್ತು ಮೆಂತ್ಯೆ ಮಿಶ್ರಣಕ್ಕೆ, ಉಪ್ಪು ಬೆಲ್ಲ ಮತ್ತು ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು.
- ದಪ್ಪ ಬರುವವರೆಗೂ ಬೇಯಿಸಿದರೆ, ಘಮ್ ಎನ್ನುವ ಮೆಂತ್ಯೆ ಗಂಜಿ ಸವಿಯಲು ಸಿದ್ದವಾಗಿರುತ್ತದೆ.
- ಇದಕ್ಕೆ ತುಪ್ಪವನ್ನು ಸೇರಿಸಿ ಸವಿದರೆ ರುಚಿಯೇ ಅದ್ಭುತವಾಗಿರುತ್ತದೆ.