ಮಾಪುಟೊಜು. ಮೂರು ಪ್ರಮುಖ ದೀರ್ಘಕಾಲೀನ ದ್ವಿದಳ ಧಾನ್ಯಗಳನ್ನು ಖರೀದಿಸುವ ಒಪ್ಪಂದ ಸಹಿತ ಒಪ್ಪಂದಗಳಿಗೆ ಗುರುವಾರ ಭಾರತ-ಮೊಜಾಂಬಿಕ್ ನಾಯಕರು ಸಹಿ ಮಾಡಿದ್ದಾರೆ. ಐದು ದಿನಗಳ ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊಜಾಂಬಿಕ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿದ ಪ್ರಧಾನಿ ಬಳಿಕ ಅಲ್ಲಿನ ಅಧ್ಯಕ್ಷ ನ್ಯೂಸಿ ಸಮ್ಮುಖದಲ್ಲಿ ಈ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.

ಅಧ್ಯಕ್ಷ ಫಿಲಿಪೆ ನ್ಯೂಸಿ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತ ಮೊಜಾಂಬಿಕ್‌ನ ನಂಬಿಕಸ್ಥ ಸ್ನೇಹಿತ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಘೋಷಿಸಿದರು. ಆ ದೇಶದ ಆರೋಗ್ಯ ವ್ಯವಸ್ಥೆ ಸುಧಾರಣೆಗಾಗಿ ಏಡ್ಸ್ ಸಹಿತ ಹಲವು ಅಗತ್ಯ ಔಷಧಿಗಳನ್ನು ಪೂರೈಸುವುದಾಗಿ ತಿಳಿಸಿದ ಮೋದಿ, ಮೊಜಾಂಬಿಕ್‌ನ ಭದ್ರತಾ ದಳಗಳ ಸೇನಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿಯೂ ಭಾರತ ಸಹಕರಿಸುತ್ತದೆ ಎಂದು ಹೇಳಿದರು. ಪ್ರಗತಿಯ ಹಾದಿಯಲ್ಲಿ ಈ ದೇಶದ ಪ್ರತಿಯೊಂದು ಹೆಜ್ಜೆಯಲ್ಲೂ ಭಾರತ ಜೊತೆಯಾಗಿ ಸಾಗುವುದಾಗಿ ಅವರು ಭರವಸೆ ನೀಡಿದರು.ಭಾರತದಲ್ಲಿರುವ ಸಿದ್ಧಿ ಸಮುದಾಯದ ಬಹುತೇಕರು ಮೊಜಾಂಬಿಕ್ ಮೂಲದವರು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ನಮ್ಮ ಜನರ ನಡುವೆ ತಲೆತಲಾಂತರಗಳಿಂದ ಚಿಂತನೆ, ಸಂಪ್ರದಾಯ, ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧವಿರುವುದಕ್ಕೆ ಈ ಸಮುದಾಯಗಳು ಸಾಕ್ಷಿಯಾಗಿವೆ ಎಂದು ಮೋದಿ ತಿಳಿಸಿದರು.
ಕೃಷಿ, ಆರೋಗ್ಯ, ಇಂಧನ ಭದ್ರತೆ, ರಕ್ಷಣೆ ಮತ್ತು ಕೌಶಲ್ಯ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ವಿಫುಲ ಅವಕಾಶಗಳಿವೆ. ಅಭಿವೃದ್ಧಿ ಮತ್ತು ಆರ್ಥಿಕ ಸಂಬಂಧಗಳಿಂದ ನಮ್ಮ ಸಮಾಜಗಳಿಗೆ ಲಾಭವಾಗಬೇಕು ಎಂದು ನಾವು ಬಯಸಿದ್ದೇವೆ. ನಮ್ಮ ಸಹಭಾಗಿತ್ವವು ಜನರ ರಕ್ಷಣೆ ಮತ್ತು ಸುರಕ್ಷತೆಯನ್ನೂ ದೃಢಪಡಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದರು.
ಸುಮಾರು 34 ವರ್ಷಗಳ ಬಳಿಕ ಮೊಜಾಂಬಿಕ್‌ಗೆ ಭೇಟಿ ನೀಡಿದ ಪ್ರಥಮ ಭಾರತೀಯ ಪ್ರಧಾನಿಯಾಗಿರುವ ಮೋದಿ, ಇನ್ನು ಮುಂದೆ ಈ ರೀತಿಯಾಗಲಾರದೆಂದು ಭರವಸೆ ನೀಡಿದರು. ಭಯೋತ್ಪಾದನೆ ವಿಷಯದಲ್ಲಿ ಎರಡೂ ರಾಷ್ಟ್ರಗಳು ಸಮಾನ ಸಂತ್ರಸ್ತರು ಎಂದು ಅಭಿಪ್ರಾಯಪಟ್ಟ ಮೋದಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಕರೆ ನೀಡಿದರು. ಉಭಯ ರಾಷ್ಟ್ರಗಳ ನಡುವೆ ಉದ್ಯಮ ಮತ್ತು ಹೂಡಿಕೆ ಬಾಂಧವ್ಯ ವೃದ್ಧಿಸುವ ಕುರಿತೂ ಮಾತನಾಡಿದರು.
