ಬಂಟ್ವಾಳ: ಪಾಣೆೇಮಂಗಳೂರು ಕಲ್ಲುರ್ಟಿ ಗುಡಿಯ ಎದುರು ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಯ ಉದ್ದೇಶಕ್ಕಾಗಿ ಜನರಿಗೆ ಉಪಯೋಗವಾಗಲೆಂದು ಮಾಡಿದ ಕಾಮಗಾರಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿರುವ ಪಾಣೆಮಂಗಳೂರಿನಲ್ಲಿ ಕೃತಕ ಕೆರೆ ನಿರ್ಮಾಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಪಾಣೆಮಂಗಳೂರು ಸತ್ಯದೇವತಾ ಗುಡಿಯ ಮುಂಭಾಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಸ್ಥಳೀಯರು ಈ ಕಾಮಗಾರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

2
ಆದರೆ ಇದೀಗ ಕಾಮಗಾರಿ ಸ್ಥಳದಲ್ಲಿ ಮಳೆಯ ನೀರು ನಿಂತಿದ್ದು ಕೆಸರುಮಣ್ಣು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಇಲ್ಲಿ ಬಸ್ಸಿನಿಂದ ಇಳಿಯುವ ಪಯಣಿಕರ ಕಾಲುಗಳು ಕೆಸರಿನಲ್ಲಿ ಹೂತು ಹೋದ ಘಟನೆಗಳಾಗಿದ್ದರೆ, ಬೈಕ್ ಸವಾರರ ಬೈಕ್ ಕೆಸರಿನಲ್ಲಿ ಬಾಕಿಯಾದ ಘಟನೆಗೂ ನಡೆದಿವೆ. ಅಲ್ಲದೆ ಇದೇ ಪ್ರದೇಶದಲ್ಲಿ ಪಾಣೆಮಂಗಳೂರು ಅನುದಾನಿತ ಪ್ರಾಥಮಿಕ ಶಾಲೆಯಿದ್ದು ಅಲ್ಲಿನ ಮಕ್ಕಳು ಇದೇ ಹೊಂಡಕ್ಕೆ ನೀರಿನಲ್ಲಿ ಆಡಲು ಬರುತ್ತಾರೆ. ಮಳೆಗಾಲದಲ್ಲಿ ನೀರಿನ ಮಟ್ಟ ಗೊತ್ತಾಗದೆ ಮಕ್ಕಳಿಗೆ ಅಪಾಯವನ್ನು ತಂದೊಡ್ಡುವ ಭೀತಿ ಇದೆ. ಜತೆಗೆ ಸ್ಥಳೀಯ ಮನೆಯವರ ಕಂಪೌಂಡ್ ಕುಸಿಯುವ ಹಂತಕ್ಕೆ ತಲುಪಿದೆ. ಅವರ ಮನೆಗೆಳಿಗೆ ನಡೆದುಕೊಂಡು ಹೋಗಲು ದಾರಿಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಆರ್ಭಟ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸದ್ರಿ ಸ್ಥಳದಲ್ಲಿ ನೀರು ಹರಿದುಹೋಗಲು ಚರಂಡಿ ನಿರ್ಮಿಸಲು ಸ್ಥಳೀಯಾಡಳಿತ ಅಥವಾ ಹೆದ್ದಾರಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *