ನವದೆಹಲಿ: ಪ್ರಮಾಣ ವಚನ ಸ್ವೀಕರಿಸಿದ 5 ದಿನಗಳ ನಂತರ ನರೇಂದ್ರ ಮೋದಿ, ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸಕ್ಕೆ ತೆರಳಿದ್ದಾರೆ. 
ಕಳೆದ ಕೆಲವು ದಿನಗಳಿಂದ ಗುಜರಾತ್ ಭವನದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ರೇಸ್ ಕೋರ್ಸ್ ರೋಡ್ ನಲ್ಲಿರುವ 5 ನೇ ನಂ ಬಂಗಲೆಗೆ ಆಗಮಿಸಿದರು.
ಒಂದು ಸಣ್ಣ ಪೂಜೆಯನ್ನು ಆಯೋಜಿಸಿ ತಮ್ಮ ಹೊಸ ನಿವಾಸದ ವಾಸಕ್ಕೆ ಪ್ರಧಾನಿ ಮುನ್ನುಡಿ ಬರೆದರು. ಅವರಿಗೆ ಸಂಬಂಧಿಸಿದ ಹೆಚ್ಚಿನ ಸಾಮಗ್ರಿಗಳನ್ನು 5 ನೇ ನಂ ಬಂಗಲೆಗೆ ಸ್ಥಳಾಂತರಿಸಲಾಗಿದೆ.
ಈ ಹಿಂದಿನ ಪ್ರಧಾನಿಗಳು 7 ನೇ ನಂ ಬಂಗಲೆಯನ್ನು ತಮ್ಮ ವಾಸಕ್ಕೆ ಆಯ್ದುಕೊಂಡಿದ್ದರು. ಆದರೆ ಮೋದಿ ಅದರ ಬದಲಾಗಿ 5 ನೇ ಸಂಖ್ಯೆಯ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮೇ 26 ರಂದು ನಡೆದ ಮೋದಿ ಪದಗ್ರಹಣ ಸಮಾರಂಭದ ತರುವಾಯ ಮಾಜಿ  ಪ್ರಧಾನಮಂತ್ರಿ ಮನಮೋಹನ್ ಸಿಂಗ್  ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಿಂದ ತಮ್ಮ ಹೊಸ ನಿವಾಸಕ್ಕೆ ಸ್ಥಳಾಂತರವಾಗಿದ್ದರು. ಆದರೆ ಬಂಗಲೆಯನ್ನು ನವೀಕರಣ ಮಾಡುತ್ತಿದ್ದರಿಂದ  ಮೋದಿ ಇಷ್ಟು ದಿನ ಪ್ರಧಾನಿ ಅಧಿಕೃತ ನಿವಾಸಕ್ಕೆ ಸ್ಥಳಾಂತರವಾಗಿರಲಿಲ್ಲ.
ರೇಸ್ ಕೋರ್ಸ್ ರಸ್ತೆಯ 7 ನೇ ನಂ ಬಂಗಲೆಯನ್ನು ಮೋದಿ ತಮ್ಮ ಕಚೇರಿಯನ್ನಾಗಿ ಬಳಕೆ ಮಾಡಲಿದ್ದಾರೆ.

By suddi9

Leave a Reply

Your email address will not be published. Required fields are marked *