ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಇಂದು ಬೆಳಗ್ಗೆ 8:25ಕ್ಕೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 6:30ಕ್ಕೆ ಕಾರು ಅಪಘಾತವಾಗಿ ಅವರಿಗೆ ಹೃದಯಾಘಾತವಾಗಿದೆ. ಎಐಐಎಂಎಸ್ ಆಸ್ಪತ್ರೆಯಲ್ಲಿ ಅವರನ್ನ ದಾಖಲಿಸಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ. ಗೋಪಿನಾಥ್ ಹೃದಯಾಘಾತದಿಂದ ನಿಧನವೊಂದಿದ್ದಾರೆಂದು ವೈದ್ಯರು ಹೇಳಿರುವುದು ವರದಿಯಾಗಿದೆ.
ಮುಂಬೈಗೆ ತೆರಳುವುದಕ್ಕಾಗಿ ಇಂದಿರಾಗಾಂಧಿ ಏರ್’ಪೋರ್ಟ್’ಗೆ ಹೋಗುವ ಹಾದಿಯಲ್ಲಿ ಮೋದಿ ಬಾಗ್ ಎಂಬಲ್ಲಿ ಮುಂಡೆ ಕೂತಿದ್ದ ಕಾರಿಗೆ ಬೇರೊಂದು ವಾಹನ ಬಂದು ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗೋಪಿನಾಥ್ ಮುಂಡೆ ಕಾರಿನಿಂದ ಹೊರಬಿದ್ದಿದ್ದಾರೆ. ಈ ವೇಳೆ ಅವರ ದೇಹಕ್ಕೆ ಯಾವುದೇ ಗಂಭೀರ ಗಾಯವಾಗದಿದ್ದರೂ ಹೃದಯಾಘಾತ ಸಂಭವಿಸಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಅವರ ಸ್ವಗ್ರಾಮದಲ್ಲಿ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ.
ಒಂದು ವಾರದ ಹಿಂದಷ್ಟೇ ಮೋದಿ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಗೋಪಿನಾಥ್ ಮುಂಡೆ, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವ ವಹಿಸಿಕೊಳ್ಳುವ ಸೂಚನೆಗಳಿದ್ದವು. ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ನಿರ್ಧರಿಸಲಾಗಿತ್ತು. 65 ವರ್ಷದ ಗೋಪಿನಾಥ್ ಮುಂಡೆ 1995-99ರ ಅವಧಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಕೂಡ ಆಗಿ ಸೇವೆ ಸಲ್ಲಿಸಿದ್ದರು.
ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದ ಗೋಪಿನಾಥ್ ಮುಂಡೆ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು. ಇಂಥ ನಾಯಕನ ದುರಂತ ಸಾವಿಗೆ ಭಾರತೀಯ ಜನತಾ ಪಕ್ಷದ ನಾಯಕರೆಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
