ಬಂಟ್ವಾಳ; ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾ.ಹೆದ್ದಾರಿಗೆ ಅಳವಡಿಸಿದ ಡಿವೈಡರನ್ನು ತೆರವುಗೊಳಿಸಿದ ಬಳಿಕ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದೆ ೆಂದು ಸಾರ್ವ ಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಈ ಬಾರಿ ಚತುಷ್ಫಥ ಮೇಲ್ಸೆತುವೆಯ ಮೇಲೂ ವಾಹನ ದಟ್ಟಣೆ ಕಂಡು ಬಂದಿದ್ದು ಡಿವೈಡರ್ ತೆರವುಗೊಳಿಸಿದ್ದೇ ಇದಕ್ಕೆ ಕಾರಣ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಶುಕ್ರವಾರ ಬೆಳಿಗ್ಗೆಯಿಂದಲೇ ಟ್ರಾಫಿಕ್ ಜಾಮ್ ಪ್ರಾರಂಭಗೊಂಡಿದೆ. ಎಂದಿನಂತೆ ಶುಭ ಸಮಾರಂಭಗಳಿಗೆ ತೆರಳುವ, ತುರ್ತುಕಾರ್ಯಗಳಿಗೆ ತೆರಳುವ ವಾಹನಗಳು ತೊಂದರೆ ಅನುಭವಿಸ ಬೇಕಾಯಿತು. ಬಿಸಿ ರೋಡ್ ನಿಂದ ಸುಮಾರು 3ಕಿ.ಲೋ ಮೀಟರ್ ದೂರದವರೆಗೆ ರಾ.ಹೆದ್ದಾರಿಯಲ್ಲಿ ವಾಹನಗಳ ಸರತಿ ಸಾಲು ಕಂಡು ಬಂತು. ಪ್ರಯಾಣಿಕರು ವಾಹನಗಳಿಂದ ಇಳಿದು ನಡೆದು ಕೊಂಡು ಹೋಗವ ಪರಿಸ್ಥಿತಿ .
ಬಿ.ಸಿ.ರೋಡಿನಲ್ಲಿ ಪದೇ ಪದೇ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಂ ಮಿಶ್ರ ಸಹಿತ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮೇಲ್ಸೆತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ರಾ.ಹೆ.ಪಾಧಿಕಾರದ ಅಧಿಕಾರಿಗೆ ಸೂಚಿಸಿದ್ದರು.
ಅದರಂತೆ ಕೆಲವೇ ದಿನಗಳಲ್ಲಿ ಪ್ರಣಾಮ್ ಹೋಟೇಲ್ ಬಳಿ ಡಿವೈಡರ್ ತೆರವುಗೊಳಿಸಿ ಮೇಲ್ಸೆತುವೆಯ ಮೇಲಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಘನ ವಾಹನಗಳು ಮೇಲ್ಸೆತುವೆಯ ಮೇಲಿಂದ ಸಂಚರಿಸಿದರೂ ಸೇತುವೆಯ ಅಂತ್ಯ ಭಾಗದಲ್ಲಿ ಮತ್ತೆ ಏಕಮುಖ ಸಂಚಾರವೇ ಇದ್ದು ವಾಹನಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಅಲ್ಲದೆ ಇಲ್ಲಿ ರೈಲ್ವೇ ಮೇಲ್ಸೆತುವೆಯೂ ಇರುವುದರಿಂದ ರಸ್ತೆಯೂ ಕಿರಿದಾಗಿದೆ. ಇದರಿಂದ ಮತ್ತೆ ಟ್ರಾಫಿಕ್ ಜಾಮ್ ಕಾಣಿಸಿಕೊಳ್ಳುತ್ತಿದೆ.


