ಪಡುಬಿದ್ರಿ : ಇಲ್ಲಿಗೆ ಸಮೀಪದ ಎಲ್ಲೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನವ ನಿರ್ಮಾಣ ಬ್ರಹ್ಮಕಲಶಾಭಿಷೇಕ ವರ್ಧಂತ್ಯುತ್ಸವವು ಈ ಬಾರಿ ಬುಧವಾರದಂದು ನೆರವೇರಿತು.
ಆ ಪ್ರಯುಕ್ತ ಶ್ರೀ ದೇವರಿಗೆ ಪಂಚ ವಿಂಶತಿ ಕಲಶಾಭಿಷೇಕ ಸಹಿತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಾರ್ಷಿಕ ವರ್ಧಂತಿ ಉತ್ಸವವು ಜರಗಿದ್ದು, ಸಾರ್ವಜನಿಕ ಅನ್ನ ಸಂತರ್ಪಣೆಯೂ ನಡೆಯಿತು.
ಸಂಪೂರ್ಣವಾಗಿ ಸರಕಾರದ ಅಧೀನದಲ್ಲಿರುವ ಎ ಶ್ರೇಣಿಯ ಈ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು, ಮಾಮೂಲಿನಂತೆ ಮಾ.12ರಂದು ನೆರವೇರುತ್ತಿದ್ದ ಈ ಉತ್ಸವವು ನಿಲುಗಡೆಗೊಂಡಿದ್ದು ಸೀಮೆಯ ಜನರು ಆತಂಕಿತರಾಗಿದ್ದರು. ಮಾದರಿಯಾಗಿ ಜೀರ್ಣೋದ್ಧಾರ ಪ್ರಕ್ರಿಯೆಯು 2009ರಲ್ಲಿ ಎಲ್ಲೂರಿನಲ್ಲಿ ನಡೆದಿತ್ತು. ಭಕ್ತರು ಭಕ್ತಿ ಭಾವದಿಂದ ಉಳ್ಳಾಯನ ಈ ಜೀರ್ಣೋದ್ಧಾರ ಕಾರ್ಯ ನಡೆಸಿದ್ದರು. ಈ ಐತಿಹಾಸಿಕ ಶುಭ ಗಳಿಗೆಯ ನೆನಪಿಗೆ ಮಾ.12ರಂದು ವರ್ಧಂತ್ಯುತ್ಸವವು ಸಂಭ್ರಮಾಚರಣೆಯ ದ್ಯೋತಕವಾಗಿ ಆ ನಂತರ ವರ್ಷಗಳಲ್ಲಿ ನಡೆಯುತ್ತಾ ಬಂದಿತ್ತು. ಈ ವರ್ಷವೂ ನಡೆಯಬೇಕಿತ್ತು. ಆದರೆ ನಡೆದಿರಲಿಲ್ಲ. ಇದರಿಂದಾಗಿ ಸಾಕಷ್ಟು ರೀತಿಯ ಗೊಂದಲಗಳನ್ನು ಈ ಸಮಸ್ಯೆ ಸೃಷ್ಟಿ ಹಾಕಿತ್ತು. ಇದೀಗ ಬ್ರಹ್ಮಕಲಶಾಭಿಷೇಕ ವರ್ಧಂತ್ಯುತ್ಸವವು ನೆರವೇರುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಯಿತು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ನಿ.ಪೂ. ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ, ಕುಂಡಂತಾಯ ಮನೆತನದ ಪವಿತ್ರಪಾಣಿ, ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ, ವೇ.ಮೂ. ಪಾದೂರು ಲಕ್ಷ್ಮೀನಾರಾಯಣ ತಂತ್ರಿ, ವೇ.ಮೂ. ಬೆಟ್ಟಿಗೆ ವೆಂಕಟರಾಜ ತಂತ್ರಿ, ವೇ.ಮೂ. ಕಳತ್ತೂರು ಉದಯ ತಂತ್ರಿ, ಅರ್ಚಕರಾದ ಶ್ರೀನಿವಾಸ ಭಟ್, ವೆಂಕಟೇಶ್ ಭಟ್, ಕುಂಜೂರು ಶ್ರೀ ದುರ್ಗಾ ದೇವಳದ ವ್ಯವಸ್ಥಾಪನಾ ಸಮಿತಿಯ ನಿ.ಪೂ. ಅಧ್ಯಕ್ಷ ನಡಿಮನೆ ಬಿ. ದೇವರಾಜ ರಾವ್, ಕೇಂಜ ಶ್ರೀಧರ ತಂತ್ರಿ, ವೈ. ಯಶವಂತ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ, ದೀಪಕ್ ವೈ, ಶ್ರೀ ವತ್ಸರಾವ್, ಬಿ. ವಾದಿರಾಜ ರಾವ್, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ಪ್ರವೀಣ್‍ಭೋಜ ಶೆಟ್ಟಿ, ಅರಾಯಿಮನೆ ರತ್ನಾಕರ ಶೆಟ್ಟಿ, ಬಡಿಕೇರಿ ಹರಿದಾಸ ರಾವ್, ಆಡಳಿತಾಧಿಕಾರಿ ಪ್ರವೀಣ್ ಬಿ. ನಾಯಕ್, ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಪ್ರಬಂಧಕ ರಾಘವೇಂದ್ರ ಭಟ್, ಎಲ್ಲೂರು ಸೀಮೆಯ ಕೂಡುಕಟ್ಟಿನ ಸ್ಥಳವಂದಿಗರು, ಊರಿನ ಹಿರಿಯ ಧಾರ್ಮಿಕರು, ಊರಪರವೂರ ಭಕ್ತರು, ಅರ್ಚಕರು ಹಾಗೂ ನೌಕರ ವೃಂದದವರು ಪಾಲ್ಗೊಂಡಿದ್ದರು.




